Tuesday, January 23, 2007

ಏಕಾಂಗಿ

ನನ್ನ ಇನ್ನೊಂದು ಹಳೆಯ ಕವನ -- ಏಕಾಂಗಿ

ಮತ್ತೊಂದು ಹಗಲು, ಮತ್ತೊಂದು ಇರುಳು
ತೆರೆದ ಪುಸ್ತಕದ ಹಾಳೆ ಮಗುಚಿದಂತೆ ಕಳೆಯಿತು
ಕಾಲಗಣನೆಯ ಚಿಂತೆ ನನಗಿಲ್ಲ
ಆಲೋಚನೆಗಳಲ್ಲಿ ಮುಳುಗಿರುವೆ, ಮನಸು ಏಕಾಂಗಿ

ಹಾದಿಯಲಿ ನಡೆವಾಗ ಪರಿಚಿತರಿಗಾಗಿ ಕಣ್ಣರಸುತ್ತದೆ
ಮುಖವಾಡದ ಕಪಟನಗೆ ಕಂಡು ಮನ ಮುದುಡುತ್ತದೆ
"ಇದಲ್ಲ ನಿನ ಜಾಗ, ಓಡೆಂದು" ಒಳಮನಸು ಚೀರುತ್ತದೆ
ಎಲ್ಲೇ ಹೋಗು ಅದೇ ಮುಖ, ಅದೇ ಕಪಟ ನಗೆ

ನಿನ್ನೆ ಇದ್ದವರು ಇಂದಿಲ್ಲ
ಇಂದಿರುವವರು ನಾಳೆ ಎಲ್ಲೊ
ಬಾಳೆಂಬ ಆಟದಲಿ ಎಲ್ಲರೂ ಏಕಾಂಗಿಗಳು
ನಾಲ್ಕುದಿನದ ಬದುಕಿನಲಿ ಜೊತೆಗಾರರ ಹುಡುಕಾಟವು

ಏಕಾಕಿತನದ ಆಲೋಚನೆಗಳ ನಡುವೆ
ಅಕ್ಕನ ಪುಸ್ತಕದ ಸಾಲುಗಳು ಅಣಕಿಸುತ್ತವೆ
"ಹಮ್ ಇಸ್ ದುನಿಯಾ ಮೆ ಆತೆ ಭಿ ಅಕೇಲೆ, ಔರ್ ಜಾತೆ ಭಿ ಅಕೇಲೆ
ಚಾರ್ ದಿನ್ ಕಿ ಇಸ್ ದುನಿಯಾ ಮೆ ಹಮ್ ಅಕೇಲೆ ಹಿ ಅಕೇಲೆ"
~ ಮಾಪ್ರಶಾಂತ

Tuesday, January 16, 2007

ಅಲ್ಪ

Trying to revive the blog - ಸುಮಾರು ಒಂದೂವರೆ ವರ್ಷದ ಹಿಂದೆ ಬರೆದ ಒಂದು ಕವನ -

ಅಲ್ಪ

ನಾನು! ಎರಡಕ್ಷರಗಳಲ್ಲಿ ಅದೆಷ್ಟು ದರ್ಪ
ನಾನೇ ದೊಡ್ಡವ, ನನ್ನಿಂದಲೇ ಸರ್ವಸ್ವ
ಎಂಬ ಒಣಪ್ರತಿಷ್ಠೆ, ಹಮ್ಮು-ಬಿಮ್ಮು
ಆದರೆ,

ಬೆಳುಗುಳದ ಗೊಮ್ಮಟನ ಮುಂದೆ
ಹಮ್ಮು-ಬಿಮ್ಮುಗಳು ಬೆಟ್ಟದಿಂದುರುಳುತ್ತವೆ
ಒಣಪ್ರತಿಷ್ಠೆ ಸಮಿತ್ತಿನಂತೆ ಉರಿಯುತ್ತದೆ
ತ್ಯಾಗಮೂರ್ತಿಯ ಮುಂದೆ ಬೆತ್ತಲಾಗಿ ನಿಲ್ಲುವನು

ತನಗೆಲ್ಲಾ ಗೊತ್ತೆನುವ ಮನುಜನಿಗೆ
ರತ್ನಗರ್ಭಾ ವಸುಂಧರಳದು ಮೌನ ಸವಾಲು
ಅನ್ನ ಕೊಟ್ಟ ತಾಯಿಯ ಋಣಮರೆತು ಕುಣಿಯುವನು
ಆಕೆಯೊಮ್ಮೆ ಮೈಕೊಡವಿದೊಡೆ ಸದ್ದಿಲ್ಲದೆ ಮಲಗುವನು

ಕಡಲ ತೀರದಿ ಕಣ್ಣರಳಿಸಿ ನಿಂತಾಗ, ಅಲೆಗಳಂತೆ
ವಿ. ಕೃ. ಗೋಕಾಕರ ಸಾಲುಗಳು ಸುಳಿದಾವು
"ಮೆರೆಯಬಂದ ಮಾನವನು ಮಗುವಾಗಿ ಮರಳುವನು"
ಅದು ನಾನು ಅಣುವಿಗಿಂತಲೂ ಅಣುವೆನ್ನುವಷ್ಟೇ ಸತ್ಯ
~ ಮಾಪ್ರಶಾಂತ

Monday, March 13, 2006

ನೆನಪುಗಳು - ಹಳೆಯದೊಂದು ಕವನ

Blog update ಮಾಡಿ ಬಹಳ ದಿನಗಳಾದವು. ಜೊತೆಗೆ ಬರೆಯಲೂ ಸಮಯ ಸಿಗುತ್ತಿಲ್ಲ. ಹಾಗಾಗಿ ನಾನು ಬಹಳ ಹಿಂದೆ ಬರೆದಿದ್ದ ಒಂದು ಕವನವನ್ನು post ಮಾಡುತ್ತಿದ್ದೇನೆ
--
ನೆನಪುಗಳು
ಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ,
ಮನದಲಿ ಸವಿ ನೆನಪುಗಳನು ಬಿತ್ತಿ

ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ
ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ

ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ
ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ

ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ
ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ

ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ
ಮಾವಿನ ಮರಕೆ ಕಲ್ಲನು ಹೊಡೆದು ಹಣ್ಣ ಕೆಡವ ಬನ್ನಿ

ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ

~ ಮಾಪ್ರಶಾಂತ

Monday, February 20, 2006

ಇಕ್ಕಳ

ಸುಮ್ಮನೆ ಬದಲಾವಣೆಯಿರಲಿ ಅಂತ ತಲೆಕೂದಲನ್ನ ೨-೩ ತಿಂಗಳು ಕತ್ತರಿಸದೆ ಪೊದೆಯಂತೆ ಬಿಟ್ಟಿದ್ದೆ. ಸಿಕ್ಕಿದವರೆಲ್ಲರದ್ದೂ ನನ್ನ ತಲೆಯಬಗ್ಗೆ commentಸೋ commentಸು. ಎರಡು ದಿನದ ಹಿಂದೆ ಹೋಗಿ ಕೊನೆಗೂ ಕಟಿಂಗ್ ಮಾಡಿಸಿ ಬಂದೆ. ಸರಿ ಶುರುವಾಯಿತು, ಎಲ್ಲರಿಗೂ ನನ್ನ ತಲೆ ಮೇಲೆಯೇ ಕಣ್ಣು - "ಯಾಕೆ ಕಟಿಂಗ್ ಮಾಡಿಸ್ದೆ?" ಪ್ರಶ್ನೆ.

ಕೆ. ಎಸ್. ನ ರವರು ಹೇಳಿದಂತೆ, ಒಳ್ಳೆ ಇಕ್ಕಟ್ಟಿನ ಪರಿಸಿತ್ಥ.
ಅದೇನು ಜನರೊ, ಇವರಿಗೆ ನಾನು ತಲೆ ಕೂದಲು ಬಿಟ್ಟರೂ ಕಷ್ಟ, ಹೇರ್ಕಟ್ ಮಾಡಿಸಿದರೂ ಕಷ್ಟ.

Tuesday, February 07, 2006

ಫಟೀರ್

ಚಳಿಗಾಲ ಬಾಲ್ಯ, ಕೌಮಾರ್ಯ ದಾಟಿ ಯೌವನಕ್ಕೆ ಕಾಲಿಡುತ್ತಿದ್ದ. ನವೆಂಬರ್ ತಿಂಗಳಿನ ಆ ಚಳಿಯಲ್ಲಿ ಮಟಮಟ ಮಧ್ಯಾಹ್ನ ಬಿಸಿಲಲ್ಲಿ ನಡೆಯುವ ಮಜವೇ ಬೇರೆ. ಆ ಶನಿವಾರ ಶಾಲೆ ಮುಗಿಸಿ ಮನೆಗೆ ಹೊರಟಿದ್ದೆ. ಆಗ ತಾನೆ ಸೈಕಲ್ ಕಲಿತು ೪-೫ ತಿಂಗಳುಗಳಾಗಿದ್ದವು. ಶಾಲೆಗೆ ಅಕ್ಕನ ಲೇಡೀಸ್ ಸೈಕಲ್ (BSA SLR) ತೆಗೆದುಕೊಂಡು ಹೋಗುತ್ತಿದ್ದೆ. ಮನೆಯಿಂದ ಶಾಲೆಗೆ ಹೆಚ್ಚೂಕಮ್ಮಿ ಮೂರು ಕಿಮೀ. ಮನೆಯಿದ್ದದ್ದು ಊರಿನ ಉತ್ತರ ತುದಿಯಾದರೆ, ಶಾಲೆ ದಕ್ಷಿಣ ತುದಿ. ನಮ್ಮ ಮನೆಯ ಸುತ್ತುಮುತ್ತಲಿಂದಲೇ ೪-೫ ಜನ ಒಟ್ಟಿಗೆ ಹೋಗುತ್ತಿದ್ದೆವು. ಸೈಕಲ್ ಕಲಿತುದರ ಹೊಸತು, ಜೊತೆಗೆ ನಮ್ಮಲ್ಲೇ ಯಾರು ಬೇಗ ಹೋಗುವರ್‍ಓ ಎಂಬ ಪೈಪೋಟಿ. ಶಾಲೆಗೆ ಹೋಗುವುದು, ಬರುವುದೆಂದರೇ ಮಜವಾಗಿರುತ್ತಿತ್ತು. ಆ ದಿನ ಮಾರ್ನಿಂಗ್ ಕ್ಲಾಸ್ ಮುಗಿಸಿ ಮನೆಗೆ ಹೊರಟಿದ್ದೆ. ಜೊತೆಗೆ ಅದೇನೋ ಒಬ್ಬರೂ ಇರಲ್ಲಿಲ್ಲ. ಮಧ್ಯಾಹ್ನದ ಚಿಗುರು ಬಿಸಿಲಲ್ಲಿ ಹಸಿದ ಹೊಟ್ಟೆ ಹೊತ್ತು ಮನೆ ಕಡೆಗೆ ನಿಧಾನವಾಗಿ ಸಾಗಿದ್ದೆ. ಹೆಚ್ಚೂ ಕಮ್ಮಿ ಮುಕ್ಕಾಲು ಭಾಗ ದಾರಿ ಸವೆಸಿದ್ದೆ, ಧಿಡೀರ್ ಅಂತ ಸೈಕಲ್‍ಗೆ ಬಂದ ಈ 'ಕೆಂಚ'.

ಏನಾಯ್ತು ಮುಂದೆ ಅಂತ ಹೇಳೋಕೆ ಸ್ವಲ್ಪ, ಈ ಕೆಂಚನ ಬ್ಯಾಕ್‍ಗ್ರೌಂಡ್ ಕೊಡೋಣ. ಕೆಂಚ, ಅದು ಅವನ ನಿಜವಾದ ಹೆಸರಲ್ಲ, ಅವನ ಕೂದಲು ಮತ್ತು ಕಣ್ಣಿನ ಬಣ್ಣದಿಂದಾಗಿ ಈ ಅಡ್ಡಹೆಸರು ಬಂದಿತ್ತು. ಅವನ ನಿಜವಾದ ಹೆಸರು, ರೇಣುಕ ಎಂದು - ಈ ಘಟನೆ ನಡೆದ ಎಷ್ಟೋ ವರ್ಷಗಳ ನಂತರ ನನಗೆ ಇದು ತಿಳಿಯಿತು. ನಮ್ಮಮ್ಮ ಅವನನ್ನ ಕರಿಬೇವು ಕಳ್ಳ ಅಂತಾನೆ ಕರೀತಿದ್ರು. ಯಾಕೆಂದ್ರೆ ಒಂದೆರಡು ಸಲ ನಮ್ಮ ಮನೆ ಕಾಂಪೌಂಡ್‍ನಲ್ಲಿದ್ದ ಗಿಡದಲ್ಲಿ ಕರಿಬೇವು ಕೀಳಬೇಕಾದರೆ ಸಿಕ್ಕಿಹಾಕಿಕೊಂಡು, ಬೈಸಿಕೊಂಡಿದ್ದ. ಈ ಘಟನೆ ನಡೆದಾಗ ಅವನೂ ಹೈಸ್ಕೂಲ್‍ನಲ್ಲಿದ್ದ, ಆದರೆ ಬೇರೆ ಸ್ಕೂಲ್‍ನಲ್ಲಿ. ಅದೇ ಕ್ಲಾಸ್‍ನಲ್ಲಿ ಎರಡು-ಮೂರು ಸಲ ಓದಿದ ರೆಕಾರ್ಡ್ ಬೇರೆ ಇತ್ತು ಅವನ ಹೆಸರಲ್ಲಿ, ಅದೂ ಆ ರೆಕಾರ್ಡ್‍ನ ಒಂದಕ್ಕಿಂತ ಹೆಚ್ಚು ಸಲ ರಿಪೀಟ್ ಮಾಡಿದ್ದ ಕೂಡ. ಆಗಲೇ ಅವರ ಸ್ಕೂಲಿನಲ್ಲಿ ಪ್ಲಸ್ ಸ್ಕೂಲ್ ಹೊರಗಡೆ ತರಲೆ-ಕಿತಾಪತಿಗೆ ಹೆಸರುವಾಸಿಯಾಗಿದ್ದ. ಬರೀ ಅಷ್ಟೇ ಅಗಿದ್ದಿದ್ದರೆ ಪರವಾಗಿರ್ಲಿಲ್ಲ ಜೊತೆಗೆ ಸಣ್ಣ-ಪುಟ್ಟ ಕಳ್ಳತನ, ಹುಡುಗಿಯರನ್ನು ರೇಗಿಸುವುದು ಇತ್ಯಾದಿಯೂ ಸೇರಿದ್ದವು. ಅವನ ಬಗ್ಗೆ ಇಷ್ಟು ಹೇಳಿದ್ರೆ ಸಾಕು ಅನ್ನ್ಸುತ್ತೆ, ಸರಿ ಆ ಶನಿವಾರ ಮಧ್ಯಾಹ್ನಕ್ಕೆ ವಾಪಸ್ಸಾಗೋಣ.

ಅವತ್ತು, ಸ್ಟಡ್ ಫ಼ಾರ್ಮ್ (ನಮ್ಮೂರಿನವರ ಬಾಯಲ್ಲಿ ಅದು ಕುದುರೆ ಫ಼ಾರಮ್ಮು) ದಾಟಿ ರೇವತಿ ಹೋಟೆಲ್ ದಿಣ್ಣೆ ಹತ್ತಿ ಇನ್ನೇನು ಮುಂದಕ್ಕೆ ಹೋಗಬೇಕು ಅನ್ನೋ ಅಷ್ಟರಲ್ಲಿ ಕೆಂಚ ಅವನ ಸೈಕಲ್ ತಂದು ನನಗೆ ಅಡ್ಡ ನಿಲ್ಲಿಸಿದ. ನಾನು ಏನು ಅಂತ ಕೇಳಕ್ಕೆ ಮುಂಚೇನೆ ಅವನು ನನ್ನ ಕೇಳ್ದ, ಅದೂ ಜೋರು ಮಾಡೋ ರೀತಿಲಿ - "ಏನೊ ನಿಮ್ಮ ತಾತಂಗೆ ಸುಮ್ನೆ ಇರಕ್ಕೆ ಆಗಲ್ವಂತೇನೊ ಸ್ಕೂಲ್‍ನಲ್ಲಿ ??". ಥಟಕ್ಕಂತ ನಾನೂ ಕೇಳಿದೆ "ತಾತಾನಾ? ಯಾರ ತಾತ?". ಯಾಕೆಂದ್ರೆ ನನ್ನ ಇಬ್ರೂ ತಾತಂದಿರು ೧೦-೧೫ ವರ್ಷ ಮುಂಚೇನೆ ಸ್ವರ್ಗವಾಸಿಗಳಾಗಿದ್ದರು. ನನ್ನ ಪ್ರಶ್ನೆ ಕೇಳಲೇ ಇಲ್ವೇನೋ ಅನ್ನೊ ಥರಾ "ಏನು ನಿನ್ನ ತಾತ ಪೋಲಿಸ್‍ಗೆ ಕಂಪ್ಲೇಂಟ್ ಕೊಡ್ತಾರಂತ ನನ್ನ ಮೇಲೆ" ಅಂದ. ನನಗೆ ತಲೆ-ಬುಡ ಅರ್ಥವಾಗ್ಲಿಲ್ಲ, "ಏನು ತಲೆ-ಗಿಲೆ ಕೆಟ್ಟಿದೆಯಾ ನಿಂಗೆ?" ಅಂದ. "ಮಗನೆ ನಂಗೇ ತಲೆ ಕೆಟ್ಟಿದೆಯಾ ಅಂತೀಯ?" ಅಂತ ಅವನು ಹೇಳಿಮುಗಿಸಿದ ತಕ್ಷಣಾನೇ, ಫಟೀರ್ ಅಂತ ಶಬ್ದ ಕೇಳಿಸ್ತು. ಅದರ ಜೊತೆಗೆ ನನ್ನ ಎಡಗೆನ್ನೆ ಚುರುಚುರು ಉರಿಯಕ್ಕೆ ಶುರುವಾಯ್ತು. ಎರಡು-ಮೂರು ಸೆಕಂಡ್‍ಗಳಾದ ಮೇಲೆ ಹೊಳೀತು, ಅವನು ನನ್ನ ಕೆನ್ನೆಗೆ ಹೊಡೆದ ಅಂತ.

ಆಮೇಲೆ ಮತ್ತೆರಡು-ಮೂರು ಸೆಕಂಡ್ ಮನಸ್ಸು ಪೂರ್ತಿ ಬ್ಲ್ಯಾಂಕ್. ತಕ್ಷಣ ಮತ್ತೆ ಫಟೀರ್ ಅಂತ ಶಬ್ದ ಕೇಳಿಸ್ತು. ಈ ಸಲ ಅವನು ಕೆನ್ನೆ ಹಿಡಿದುಕೊಂಡು ನಿಂತಿದ್ದ. ಏನಾಯ್ತು ಅಂತ ನನಗೂ ಗೊತ್ತಾಗ್ಲಿಲ್ಲ ಮೊದಲು - ಆಮೇಲೆ ಫ಼್ಲಾಶ್ ಆಯ್ತು, ನಾನೇ ಅವನಿಗೆ ಹೊಡೆದದ್ದು ಅಂತ. ಹೊಡೆದ ಮೇಲೆ ಹೆದರಿಕೆ ಶುರು ಆಯ್ತು. ಅವನೋ ಅಜಾನುಬಾಹು. ನಾನು ನರಪೇತಲ, ಅವನ ಭುಜದಷ್ಟೂ ಎತ್ತರ ಇರಲಿಲ್ಲ ನಾನು. ಸುತ್ತಮುತ್ತ ಓಡಾಡೊವ್ರು ನಮ್ಮನ್ನೇ ನೋಡ್ತಾ ಇದ್ರು, ಏನಾಗುತ್ತೆ ಅಂತ ಕಾಯ್ಕೊಂಡು. ಎರಡು ನಿಮಿಷ ಇಬ್ರೂ ಸೈಲೆಂಟ್‍ ಆಗಿ ಒಬ್ಬರ ಮುಖ ಒಬ್ರು ನೋಡ್ತ ನಿಂತಿದ್ವಿ, ಇದ್ದಕ್ಕಿದ್ದಂಗೆ ಜೀವ ಬಂದಂಗೆ ಕೆಂಚ ಕೆಳಕ್ಕೆ ಬಿದ್ದಿದ್ದ ಸೈಕಲ್ ಎತ್ತಿಕೊಂಡು ಹತ್ತಿ ಹೊರಟೇ ಬಿಟ್ಟ. ಐದು ನಿಮಿಷ ನಾನು ಮಿಕಿಮಿಕಿ ನೋಡ್ತ ನಿಂತಿದ್ದು ಸೈಕಲ್ ಎತ್ಕೊಂಡು ಮನೆಗೆ ಹೋದೆ.

ಮನೆಗೆ ಹೋದ ಮೇಲೆ ಹೀಗೆ ಹೀಗೆ ಆಯ್ತು ಅಂತ ಎಲ್ಲ ಹೇಳಿದೆ. ಆಗ ಅವನ ವರ್ತನೆ ಬಗ್ಗೆ ತಿಳೀತು ನನಗೆ. ನಮ್ಮ ತಂದೆ ಒಂದು ಗರ್ಲ್ಸ್ ಸ್ಕೂಲ್‍ನಲ್ಲಿ ಟೀಚರ್ ಆಗಿದ್ರು. ಒಂದೆರಡು ದಿನಗಳಾ ಹಿಂದೆ ಆ ಸ್ಕೂಲ್ ಹತ್ತಿರ ಓಡಾಡ್ಕೊಂಡು ಹುಡುಗೀರನ್ನ ಚುಡಾಯಿಸ್ತಾ ಇದ್ದ ಅವನು. ನಮ್ಮ ತಂದೆ ಅವನನ್ನ ಹಿಡಿದು ಎಚ್ಚರಿಕೆ ಕೊಟ್ಟು, ಇನ್ನೊಂದು ಸಲ ಈ ರೀತಿ ಆದರೆ ಪೋಲಿಸ್‍ಗೆ ಹೇಳ್ತೀವಿ ಅಂತ ಬೈದು ಕಳಿಸಿಬಿಟ್ಟಿದ್ದರು. ಅದರ ಜೊತೆಗೆ ನಮ್ಮ ತಂದೆಗೆ ತಲೆ ಪೂರ್ತಿ ಬಿಳಿ ಕೂದಲು, ಹೊಸಬರು ಬಹಳಷ್ಟು ಜನರು ನಮ್ಮಿಬ್ಬರನ್ನು ತಾತ-ಮೊಮ್ಮಗ ಅಂತ confuse ಮಾಡಿಕೊಂಡಿದ್ದಾರೆ.

ಈ ಘಟನೆ ನಡೆದು ೧೨-೧೩ ವರ್ಷಗಾಳದವು. ಬಹಳಷ್ಟು ಸಲ ಅವನನ್ನ ನೋಡಿದ್ದೇನೆ ಊರಿನಲ್ಲಿ. ಸ್ವಲ್ಪ ದಿನ ಆಟೋ ಕೂಡ ಓಡಿಸ್ತಿದ್ದ. ಎರಡು ಸಲ ಅವನ ಆಟೋನಲ್ಲೇ ಕೂತು ಮನೆಗೆ ಬಂದಿದ್ದೇನೆ. ಈ ಘಟನೆ ಅವನಿಗೆ ಜ್ಞಾಪಕವಿದೆಯೋ ಇಲ್ವೋ, ಆದರೆ ನನಗಂತೂ ಇನ್ನೂ ಮರೆಯಕ್ಕೆ ಆಗಿಲ್ಲ.

Thursday, January 26, 2006

ಇಂದು ಪ್ರಶಾಂತ್‍ನ ಹುಟ್ಟುಹಬ್ಬ.

ಇಂದು ಪ್ರಶಾಂತ್‍ನ ಹುಟ್ಟುಹಬ್ಬ.
"ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪಚ್ಚಿ :)"
ಈ ಸಂದರ್ಭದಲ್ಲಿ ನಮ್ಮ ತ.ವಿ.ಶ್ರೀನಿವಾಸ್‍ರ ಶುಭಸಂದೇಶವನ್ನು ಇಲ್ಲಿ ಹಾಕುತ್ತಿದ್ದೇನೆ. ಧನ್ಯವಾದಗಳು ಸಾರ್. :)

"ಇಂದು ಜನವರಿಯ ೨೬ನೇ ತಾರೀಖು. ಗಣರಾಜ್ಯೋತ್ಸವ ದಿನ. ಎಲ್ಲರಿಗೂ ಹರುಷ ತರುತ್ತಿರುವ ದಿನ. ಆದರಿನ್ನೂ ಹೆಚ್ಚಿನ ಸಂತಸದ ವಿಷಯ ಅಂದ್ರೆ ನಮ್ಮೆಲ್ಲರ ನಲ್ಮೆಯ ಮಿತ್ರರಾದ ಮಾ.ಪ್ರಶಾಂತರ ಜನುಮದ ದಿನ. ನಾವೆಲ್ಲರೂ ಅವರಿಗೆ ಶುಭಾಶಯವನ್ನು ಕೋರೋಣ."


ಕನ್ನಡಮ್ಮನ ಕುತ್ತಿಗೆಯಲಿಹುದು ಮುತ್ತಿನ ಹಾರ
ಆ ಹಾರದಲ್ಲೊಂದು ಪ್ರಜ್ವಲಿಪ ಮಾಣಿಕ್ಯ
ಆ ಮಾಣಿಕ್ಯದ ಜೊತೆಗಿನ್ನೊಂದು ಪುಟ್ಟ ಮುತ್ತು
ಹೆಮ್ಮೆಯಿಂದ ಬೀಗುತಿಹರು ಇದ ನಮಗಿತ್ತು

ಸಹಸ್ರಾರು ಮಕ್ಕಳಿಗೆ ದಾರಿ ದೀಪ ಆ ಮಾಣಿಕ್ಯ
ತೋರಲಿ ಕೋಟ್ಯಂತರ ಕನ್ನಡಿಗರಿಗೆ ದಾರಿ ಈ ಮುತ್ತು
ವಾಕ್ ಕಲಿಸಿದ ಮೊದಲ ಗುರು ವಾಗ್ದೇವಿ ಅಮ್ಮ
ಛಾಯಾಚಿತ್ರ ಸೆರೆ ಹಿಡಿಯುವುದರಲ್ಲಿ ಅಪ್ರತಿಮ

ಹೆಸರಿಸಲು ಬಾರದವರ ಬಾಯಲ್ಲಿ ಇವರು ಅಪಭ್ರಂಶ
ಹೆಸರಿಸಿಕೊಂಡರದಕೆ ಗಣಿತದ ಭಾಷಾ
ಟೆಸ್ಟಿಂಗ್ ಪ್ರವೀಣ ಈ ತಂತ್ರಾಂಶ ಅಭಿಯಂತ
ಸಾಹಿತ್ಯ ಸೇವೆಯಲೇನೂ ಕಡಿಮೆ ಇಲ್ಲದ ಪಂಡಿತ

ಸುಶೀಲರ ಜೊತೆಗೂಡಿ ನಡೆಸುತಿಹರು ಬ್ಲಾಗು
ಕನ್ನಡ ಅವಹೇಳನ ಮಾಡುವವಗೆ ಇವರ ಕೂಗು
ಇವರ ಹಿಡಿತದಲ್ಲಿಟ್ಟಿಹಳು ಆ ಬಾಸಮ್ಮ
ಸಾಹಿತ್ಯ ಭಂಡಾರದೊಡೆಯರು ಇವರ ಜನಕ

ವಾರಕ್ಕೊಮ್ಮೆ ಇವರ ಭೇಟಿ ಕುಣಿಗಲ್ಲಿಗೆ
ಮಾರು ಹೋಗಿಹರು ಹಳ್ಳಿಯ ಸೊಗಡಿಗೆ
ಛಾಯಾಚಿತ್ರದಲಿ ಸೆರೆ ಹಿಡಿದಿಹರು ಚಿಣ್ಣರ ಮುಗ್ಧ ಮುಖವ
ಕವನದಲಿ ಸೆರೆ ಹಿಡಿದಿಹರು ಕಾಣದಿರುವ ಆ ಮುಖವ

ಚೆನ್ನೈನ ಕಂಡಕ್ಟರನ್ನೊಮ್ಮೆ ಪ್ರದರ್ಶಿಸಿದರು
ಅಸುನೀಗಿದ ಪುಟ್ಟ ಕಂದಮ್ಮನ ಅಳಲು ತೋರಿದರು
ಇವರ ಕೈ ಇನ್ನೂ ಬಲಗೊಳ್ಳಲಿ ತಾಯ ಸೇವೆಗೆ
ನಾವೆಲ್ಲರೂ ಹಾರೈಸುವ ಇವರ ಸುದೀರ್ಘ ಆಯಸ್ಸಿಗೆ

ಆ ಸರ್ವಶಕ್ತನಲ್ಲಿ ನನ್ನ ಬೇಡಿಕೆ ಇವರಿಗೆ ಆಯುರಾರೋಗ್ಯ,
ಅಷ್ಟೈಶ್ವೈರ್ಯ, ಸುಖ ದು:ಖಗಳನ್ನು ಸಮನಾಗಿ
ಸ್ವೀಕರಿಸುವ ಶಕ್ತಿಯನ್ನಿತ್ತು ಕನ್ನಡ-ಕನ್ನಡಿಗರ
ಸೇವೆಯನ್ನು ಇನ್ನೂ ಹೆಚ್ಚಿನದಾಗಿ ಮಾಡುವಂತೆ ಮಾಡಲಿ ಎಂದು ಬೇಡುವೆ.
ನೂರ್ಕಾಲ ಬಾಳಲಿ ನಂಬಿದವರೆಲ್ಲರನೂ ಬದುಕಿಸಲಿ

Monday, January 16, 2006

TP - Timepass

ನನ್ನ ಒಂದು ವರ್ಷದ ಅನುಭವದಲ್ಲಿ ನಾ ಮಾಡಿದ Time-pass ಬಗ್ಗೆ ನನ್ನ ಬ್ಲಾಗ್ನಲ್ಲಿ ಒಂದು ಪ್ರಬಂಧ ಬರೆದಿದ್ದೆ.ಅದನ್ನೇ ಇಲ್ಲಿ ಹಾಕೋಣ ಅನ್ನಿಸ್ತು.
ಸ್ವಲ್ಪ torture ಅನ್ನಿಸಿದರೆ ಕ್ಷಮೆ ಇರಲಿ!


ವಿ.ಸೂ: ಯಾತಕ್ಕೂ ಒಂದು ಸಾರಿಡಾನ್/ಸೂಪರ್‍ಜಿನ್ ಇಲ್ಲವೇ ಝಂಡುಬಾಮ್ ತಯಾರಾಗಿಟ್ಕೊಳ್ಳೋದು ಒಳ್ಳೇದು

Time-Pass : Short n Sweet ಆಗಿ TP!
ಎಲ್ಲರೂ ಅವರವರದೇ ಆದ ರೀತೀಲಿ ಟಿ.ಪಿ. ಮಾಡ್ತಾರೆ...ಇಲ್ಲಿ ನನ್ನ ಟಿ.ಪಿ. ಬಗ್ಗೆ ಬರೆಯೋಣಾಂತ.

ಬ್ರಿಸ್ಟಲ್‍ಗೆ ಬಂದಾಗಿನಿಂದಲೂ ನನ್ನ ಟಿ.ಪಿ. ಅಂದ್ರೆ ಮನೇಲ್ ಕೂತು ಸಿನಿಮಾ ನೋಡೋದು.ನಾನು ಬರೋವಾಗ ಬರೀ ಹಾಡುಗಳ ಸಿ.ಡಿ. ತಂದಿದ್ದೆ..ಆದ್ರೆ ಬುದ್ಧಿ ಉಪಯೋಗಿಸಿ ನನ್ನ ಸ್ನೇಹಿತ ಬರೋವಾಗ ಒಳ್ಳೊಳ್ಳೆ ಸಿನಿಮಾಗಳ ಸಿ.ಡಿ/ಡಿ.ವಿ.ಡಿ ತರಿಸಿಕೊಂಡೆ.ನನ್ನ ಬಳಿಯಿರುವ ಸಿನಿಮಾ ಲಿಸ್ಟು:
ಕನ್ನಡ : ಗಣೇಶನ ಮದುವೆ; ಗೌರಿ-ಗಣೇಶ; ಉಲ್ಟಾ-ಪಲ್ಟಾ; ಬೆಳದಿಂಗಳ ಬಾಲೆ [ನಾನೇ ಬರೋವಾಗ ಇನ್ನೂ ತರಬೇಕಿತ್ತು ಅಂತ ಎಷ್ಟು ಪೇಚಾಡ್ಕೋತಿದೀನಿ ]
ಹಿಂದಿ : ಶೋಲೆ; ಕಲ್ ಹೋ ನ ಹೋ; ಚಲ್ತೇ-ಚಲ್ತೇ; ಮೇ ಹೂ ನಾ; ಮುಝ್ಸೆ ಶಾದಿ ಕರೋಗಿ?; ಸ್ವದೇಸ್; ರೋಜಾ; ಬಾಂಬೆ;etc
English : Mr.Bean series;Charlie Chaplin Series; Swordfish; Ronin; Titanic; Catch me if you can; Beach; Phone Booth; American Pie series;

ಇದಲ್ಲದೇ ನನ್ನ ಸ್ನೇಹಿತನ ಹತ್ರ ಕೆಲವು ಚಿತ್ರಗಳಿದ್ವು.ಒಳ್ಳೊಳ್ಳೆ ತಮಿಳು/ತೆಲುಗು classics ಕೂಡಾ ಇದ್ವು.
[ಮೌನರಾಗಂ,ಆಟೋಗ್ರಾಫ್,ಪಾರ್ತಿಬನ್ ಕನವು,ಸಾಗರ ಸಂಗಮಂ, ನೂವು ನಾಕ್ಕು ನಚ್ಚಾವ್,ಒಕ್ಕಡು,ಮುರಾರಿ etc]

ಮೊದ-ಮೊದಲಿಗೆ ನಮಗೂ ಹುಮ್ಮಸ್ಸು...ನೋಡಿದ ಚಿತ್ರವನ್ನೇ ಮತ್ತೆ-ಮತ್ತೆ, ಪ್ರತಿಯೊಂದು ಡೈಲಾಗೂ ಬಾಯಿಗೆ ಬರೋ ಮಟ್ಟಿಗೆ ಅದದೇ ಸಿ.ಡಿ.ಗಳನ್ನ ತಿರುಗಿಸಿ-ಮುರುಗಿಸಿ ನೋಡಿದ್ವಿ.ಇದಲ್ಲದೇ ನಮ್ಮ ಅದೃಷ್ಟವೋ ಇಲ್ಲ ಅವನ ದುರಾದೃಷ್ಟವೋ ಎಂಬಂತೆ ನನ್ನ ಸ್ನೇಹಿತನ boss ಒಬ್ಬ ಮನೇಲಿ DVD ಭಂಡಾರವನ್ನೇ ಇಟ್ಟಿದ್ದ. ಪಾಪ ಅವ್ನಿಗೇನು ಗೊತ್ತು ನಾವು ಅರ್ಧರಾತ್ರೀಲಿ ಎಬ್ಬಿಸಿ "ಸಿನಿಮಾ ನೋಡ್ರೋ" ಅಂದ್ರೆ ಕಣ್ಣುಜ್ಜಿಕೊಂಡು ಆಕಳಿಸ್ತಾ ಮಿಸ್ ಮಾಡದೇ ನೋಡ್ತಿದ್ದ ಬರಗೆಟ್ಟ ಬಾಡಿಗಳು ಅಂತ...Formalityಗೋ ಏನೋ ಒಂದ್ಸಲ "ನಿಮಗೆ ಬೇಕಿದ್ರೆ DVDಗಳ್ನ ತೊಗೊಂಡು ನೋಡಿ" ಅಂದುಬಿಟ್ಟ.ಸಿಕ್ಕಿದ್ದೇ chanceಉ ಇರೋ ಬರೋ ಸಿನಿಮಾಗಳ್ನೆಲ್ಲಾ ಎತ್ತಾಕೊಂಡು ಬಂದು ಮತ್ತೆ ಒಂದೊಂದು ಚಿತ್ರವನ್ನೂ ೧೦ -೧೨ ಸಲ ನೋಡಿದ್ವಿ!ಆ ಚಿತ್ರಗಳ ಲಿಸ್ಟ್:
Pride and Prejudice; Sense and Sensibility; The Great Escape; Few Good Men; Erin Brockovich; Shakespeare in Love; Men of Honor; PayBack; HEAT; King Arthur; Gross Point Blank; TROY; Shakespear - Abridged; Terminal; Pirates of the Carribean

ಇಷ್ಟಲ್ಲದೇ release ಆದ ಬೇರೆ ಚಿತ್ರಗಳನ್ನೂ ಥೇಟರಿಗೆ ಹೋಗಿ ನೋಡಿದ್ದೆ!
ನಾನು ಇಷ್ಟರ ಮಟ್ಟಿಗೆ ಹುಚ್ಚನಾಗಿದ್ದೀನ ಅನ್ನಿಸಿಬಿಡ್ತಿತ್ತು ಒಮ್ಮೊಮ್ಮೆ.ಆದ್ರೇನು ಮಾಡೋದು ಇರೋದ್ರಲ್ಲಿ best ಟೈಮ್ ಪಾಸ್ ಮೆಥಡ್ ಅದು! ನಾನು Theaterನಲ್ಲಿ ನೋಡಿದ ಚಿತ್ರಗಳನ್ನೂ ಲಿಸ್ಟ್ ಮಾಡಿಬಿಡ್ತೀನಿ:
ಕಿಸ್ನಾ; ವೀರ್ ಝಾರ; ಸ್ವದೇಸ್; ಬ್ಲ್ಯಾಕ್; ಪಹೇಲಿ; ಕಾಲ್; ಸಲಾಂ ನಮಸ್ತೇ; ಗರಂ ಮಸಾಲ; ಮಂಗಲ್ ಪಾಂಡೆ; ಬಂಟಿ ಔರ್ ಬಬ್ಲಿ;
Team America; The Incredibles; The Chronicles of Narnia; King-Kong;

ಇನ್ನು ಟಿ.ವಿ./ಸಿನಿಮಾ ಬಿಟ್ಟರೆ ನನ್ನ ಟೈಂಪಾಸ್‍ ಕಾರ್ಯಕ್ರಮ ಆವಾಗಾವಾಗ ಬದಲಾಗ್ತಾನೇ ಇತ್ತು...ಇದೊಂಥರ seasonal ಆಗ್ಬಿಟ್ಟಿತ್ತು ನನ್ನ ಮಟ್ಟಿಗೆ.October-2004ನಲ್ಲಿ ನಾನು ಇಲ್ಲಿಗೆ ಬಂದಾಗ ಯಕಾಚಿಕ್ಕಿ ಛಳಿ. ಮನೆ ಆಯ್ತು ಬಿಟ್ರೆ ಆಫೀಸಾಯ್ತು ಅನ್ನೋ ಥರಾ ಇದ್ದೆ.ಆಗ ನಮ್ಮ ಏರಿಯಾದಲ್ಲಿರೋ ಸ್ಪೋರ್ಟ್ಸ್ ಸೆಂಟರ್‍ನಲ್ಲಿ Badminton ಆಡೋಕ್ ಶುರು ಮಾಡಿದ್ವಿ.[Horfield Sports Center-Indoor Courts] ಈಗಲೂ ಆಡ್ತಿದೀವಿ ಅನ್ನಿ

ಅದಾದ ಮೇಲೆ Mar-Aprನಿಂದ ಹಿಡಿದು Aug-Sep ತನಕ ನೆಮ್ಮದಿಯಾಗಿ ನಮ್ಮ ಕಂಪನಿಗಳಿಗೆ [Caritor and Orange] ಮತ್ತು 2nd Division League Tournamentಗಾಗಿ ಇಲ್ಲಿನ ಒಂದು ಲೋಕಲ್ ಟೀಮಿಗೆ Cricket ಆಡಿದೆ. ಇದೊಂಥರಾ ಒಳ್ಳೆ ಅನುಭವ ಅನ್ನಿಸ್ತು ನನಗೆ.Cricket ಹುಟ್ಟಿ ಬೆಳೆದ ನಾಡಿನಲ್ಲೇ recognisable levelಗೆ ಆಡೋದು ಒಂಥರಾ ಖುಷಿ ಕೊಡ್ತು.ಆ ಟೀಮಿನಲ್ಲಿದ್ದ ಬಿಳಿಯ ಜೊತೆಗಾರರು,ಅವರ ಆ Team spirit,ಅವರ Typical yorkshire accent [ಕ್ರಿಕೀಟ್,ವಿಕೀಟ್,ಸುಂಡೆ] English Summer ವಾತಾವರಣ...ಅಬ್ಬಬ್ಬಾ ತುಂಬಾನೆ ಇಷ್ಟವಾಯ್ತು ನನಗೆ. ಎಲ್ಲದಕ್ಕಿಂತ ಮಜಾ ಕೊಟ್ಟಿದ್ದಂದರೆ ಪ್ರತಿ ಮ್ಯಾಚಿನಲ್ಲಿ ಇರ್ತಿದ್ದ ಊಟದ ಏರ್ಪಾಡು.ಥರಾವರಿ ಹೋಂ-ಮೇಡ್ ಕೇಕುಗಳು,ಸ್ಯಾಂಡ್ವಿಚ್‍ಗಳು,ಕುಕೀಗಳು,ಟೀ/ಕಾಫಿ ಮತ್ತು ಆ ಡ್ರೆಸ್ಸಿಂಗ್ ರೂಮಿನಲ್ಲಿ ನಡೀತಿದ್ದ ಮ್ಯಾಚ್‍ ಸ್ಟ್ರ್ಯಾಟಜಿಗಳು,ಚರ್ಚೆಗಳು...ಎಲ್ಲವೂ ಒಂಥರಾ ಚೆನ್ನಾಗಿದ್ವು.

ಇದರ ಜೊತೆಗೇ ಸ್ವಲ್ಪ ದಿನ Football ಕೂಡಾ ಆಡಿದ್ವಿ.ಯಾವಾಗ್ಲಾಡ್ರೂ ಒಂದ್ಸಲ ಇಲ್ಲೇ ಇದ್ದ Infosys boys ಜೊತೆ friendly matchಗಳನ್ನೂ ಆಡ್ತಿದ್ವಿ.ಒಳ್ಳೆ ಮಜ ಇರ್ತಿತ್ತು.

ಈಗ ಮತ್ತೆ ಛಳಿಗಾಲ ಶುರುವಾಗಿ ೪ ತಿಂಗಳಾಗಿದೆ.ಈಗ ಎಲ್ಲವನ್ನೂ ಬಿಟ್ಟು ಮತ್ತೆ Badmintonಗೆ ಮರಳಿದ್ದೀನಿ.ಆದ್ರೆ ಈಗ ಮನೆಯೂ ಬದಲಾಯಿಸಿದ್ದೀನಿ..ಹಾಗಾಗಿ ನನ್ನ ಚಿತ್ರ-ವೀಕ್ಷಣೆಯ ಪಾರ್ಟ್ನರ್‍ ಸಧ್ಯಕ್ಕೆ ನನ್ನೊಡನೆ ಇಲ್ಲ. ಅವನು ನೆಮ್ಮದಿಯಾಗಿ ಭಾರತಕ್ಕೆ ಹಿಂದಿರುಗಿದ್ದಾನೆ. ನಾನೂ ಈ ಚಿತ್ರಗಳಿಗೆ ಸ್ವಲ್ಪ ಟಾಟಾ ಬೈ ಬೈ ಅಂದು, ಬ್ಲಾಗ್,KA ಕಡೆ ಹೆಚ್ಚಿನ ಗಮನ ಕೊಡ್ತಿದೀನಿ. ಇದಂತೂ ನನ್ನೆಲ್ಲ ಬೇಜಾರನ್ನೂ ಕಳೆಯುವಂತೆ ಮಾಡಿದೆ.ಇದರ ಜೊತೆಗೆ KK 24/7 ಆನ್‍ಲೈನ್ ಕನ್ನಡ ರೇಡಿಯೋ ಕೂಡಾ ನನ್ನ ಸಂಗಾತಿ.

ಮುಂದೆ ನನ್ನ ದೈನಂದಿನ ಕಾರ್ಯಕ್ರಮದ ಇತರೆ ಮಜಲುಗಳನ್ನೂ ನಿಮಗೆ ಬಡಿಸುತ್ತೇನೆ.

ನಿರೀಕ್ಷಿಸಿ:
ಅಡಿಗೆಮನೆ ಮತ್ತು ನಾನು
ನನ್ನ ಯುರೋಪ್ ಪ್ರವಾಸ

ಅಲ್ಲಿಯವರೆಗೆ - Have a nice day
Signing Off
-ಸುಸಂಕೃತ
ಮದರಾಸಿನಲ್ಲಿನ ಮೊದಲ ದಿನ

ಮೂರು ವರ್ಷದ ನನ್ನ ಹಿಂದಿನ ನೆನಪುಗಳನ್ನು ಕೆದಕಿ ಈ ಪ್ರವಾಸ ಕಥಾನಕವನ್ನು ಬರೆದಿದ್ದೇನೆ. ಬರವಣೀಗೆಯಲ್ಲಿ ಇದು ನನ್ನ ಮೊದಲ ಪ್ರಯ್ತ್ನ.
ನಿಮ್ಮ ಅನಿಸಿಕೆಗಳನ್ನು ತಿಳಿಸಿ
-----

ಜನವರಿ ೧೫ ೨೦೦೩, ಬುಧವಾರ, ಹೊಸದೊಂದು ಪಯಣಕ್ಕೆ ಸಜ್ಜಾಗುತ್ತಿದ್ದೆ. ಗೊತ್ತಿಲ್ಲದೂರಿಗೆ, ಹೊಸ ಬದುಕನ್ನು (ಅಥವಾ ಬದುಕಿನ ಹೊಸ ಅಧ್ಯಾಯವನ್ನು) ಎದುರಿಸುತ್ತ ಹೊರಡುತ್ತಿದ್ದೆ - ಒಬ್ಬಂಟಿ. ಬಹುಶಃ ಅದೇ ಮೊದಲು, ಇಂದಿನ ತನಕ ಅದೇ ಕೊನೆ -- ಅಮ್ಮ, ಅಣ್ಣ, ಅಕ್ಕ - ಎಲ್ಲರೂ ನನ್ನನ್ನು ಬೀಳ್ಕೊಡಲು ರೈಲ್ವೇ ಸ್ಟೇಷನ್‍ಗೆ ಬಂದದ್ದು. ಜೊತೆಗೆ ನನ್ನ ಕಾಲೇಜಿನ ಪಟಾಲಂ - ಶ್ರೇಯಸ್, ರಘು, ಅಭಿ, ಶ್ಯಾಮ - ಕೂಡ ಹಾಜರ್, ಬೀಳ್ಕೊಡಲು. ಮುಂದೇನು? ಅಲ್ಲೆಷ್ಟು ದಿನ ವಾಸ್ತವ್ಯ? ತಿಂಗಳುಗಳೇ? ವರ್ಷವೇ? ೨-೩ ವರ್ಷಗಳೇ? - ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹೊತ್ತು ಸಮಯಕ್ಕೆ ಸರಿಯಾಗಿ ಸಿಳ್ಳೆ ಹಾಕುತ್ತ ಬೃಂದಾವನ್ ಎಕ್ಸ್‍ಪ್ರೆಸ್ಸ್ ಮದರಾಸಿನ ಕಡೆ ಹೊರಟಿತು. ಕೊನೆಗೂ ಚಂದ್ರಮೌಳಿ ಅಣ್ಣರ (ನಮ್ಮ ಫ್ಯಾಮಿಲಿ ಫ್ರೆಂಡ್ - ಕುಟುಂಬದ ಸ್ನೇಹಿತರು) ಭವಿಷ್ಯ ನಿಜವಾಗಿತ್ತು. ನಾನು ಬಿ. ಇ. ಎರಡನೇ ಸೆಮಿಸ್ಟೆರ್‌ನಲ್ಲಿದ್ದಾಗ ಅವರೊಮ್ಮೆ ಹೇಲಿದ್ದರು - "ಎಲ್ಲರೂ ಕೆರಿಯರ್/ಕೆಲಸ ಅಂತ ಪಶ್ಚಿಮಕ್ಕೆ ಹೋದರೆ, ನೀನು ಪೂರ್ವಕ್ಕೆ ಹೋಗ್ತೀಯಾ" ಅಂತ. ಸರಿ, ಸುಮಾರು ಮೂರು ವರ್ಷಗಳ ತನಕ ಮನದಲ್ಲೇ ಮಂಡಿಗೆ ಮೆದ್ದಿದ್ದೆ - ಸಿಂಗಾಪುರ, ಆಸ್ಟ್ರೇಲಿಯಾ, ನ್ಯೂಜ಼ೀಲ್ಯಾಂಡ್ ಅಂತ. ಕೊನೆಗೆ ನೋಡಿದರೆ ಪೂರ್ವದಲ್ಲಿಯೇ ಇರುವ ಮದ್ರಾಸಿಗೆ ಹೊರಟಿದ್ದೆ.

ಈ ಮೂರು-ನಾಲ್ಕು ತಿಂಗಳುಗಳಲ್ಲಿ ನಡೆದ ಘಟನಾವಳಿಗಳು ಊಹಿಸದಲೂ ಆಗದಂತೆ ನನ್ನನ್ನು ಕುಣಿಗಲ್‍ನಿಂದ - ಬೆಂಗಳೂರು - ಚೆನ್ನೈಗೆ ರವಾನಿಸುತ್ತಿದ್ದವು. ಇನ್‍ಫ಼ೋಸಿಸ್ ನಲ್ಲಿ ಕೆಲಸ ಸಿಕ್ಕಿ, ನವೆಂಬರ್, ೨೦೦೨ ನಲ್ಲಿ ಸೇರಿ, ಸುಮಾರು ಎರಡು ತಿಂಗಳುಗಳ ಟ್ರೈನಿಂಗ್ ಮುಗಿಸಿ ೧೨೦ ಜನರ ಟ್ರೈನಿಂಗ್ ಗುಂಪಿನಿಂದ ಎಂಟು ಜನ ಭವಿಷ್ಯವನ್ನರಸುತ್ತ ಹೊರಟಿದ್ದೆವು. ಉಳಿದ ಏಳು ಜನರಲ್ಲಿ ಒಬ್ಬನೇ ಕನ್ನಡಿಗ - ವಿಶ್ವನಾಥ್ ನಿರಾಕರಿ. ನನ್ನಂತೆಯೇ ಅವನಿಗೂ ತಮಿಳು ಬರುತ್ತಿರಲಿಲ್ಲ. ಉಳಿದವರೆಂದರೆ ಚೆರಿಯನ್ - ಸೇರಿದ ಆರು ತಿಂಗಳಲ್ಲೇ ಕೆಲಸ ಬಿಟ್ಟ ಆಸಾಮಿ. ರೆನಿ ಅಬ್ರಹಾಂ - ಯಾವ ಊರಿಗೇ ಹೋದರೂ ಅಲ್ಲಿಯ ಮ್ಯಾಪ್ ಪಡೆದು ಊರೆಲ್ಲ ಸುತ್ತಾಡುವವ. ಮೊಹಮ್ಮದ್ ಬಷೀರ್ - ನಮ್ಮ ಗುಂಪಿನ ಮಿತಭಾಷಿ. ಮನು ಬಿ. ಚಂದ್ರನ್, ೬ ತಿಂಗಳು ನಂತರ ತಿರುವನಂತಪುರಕ್ಕೆ ವರ್ಗ ಪಡೆದವ - Mr. Always-need-a-doctor, ಯಾವಾಗ ನೋಡಿದರೂ ಒಂದಲ್ಲ ಒಂದು ತೊಂದರೆ. ಚೆನ್ನೈನಲ್ಲಿದ್ದ ೬ ತಿಂಗಳುಗಳಲ್ಲಿ, ೨ ತಿಂಗಳು ಜಾಂಡೀಸ್‍ನಿಂದಾಗಿ ರೆಸ್ಟ್, ಮತ್ತೆರಡು ತಿಂಗಳು ಕಾಲು ಫ್ರಾಕ್ಚರ್‍ಆಗಿ ರೆಸ್ಟ್. ನಮ್ಮ ಗುಂಪಲ್ಲಿದ್ದ ಏಕೈಕ ಹುಡುಗಿ - ಫ಼ರೀನ್ ಅಜ಼ೀಜ಼್, ಅದೇನು ಊರಲ್ಲಿದ್ದ ಅವಳ ಸಾಮಾನುಗಳೇಲ್ಲವನ್ನೂ ತಂದಿದ್ದಳೇನೋ? ನಮ್ಮ ಏಳು ಜನರ ಲಗೇಜು == ಅವಳೊಬ್ಬಳ ಲಗೇಜು, ಅಷ್ಟಿತ್ತು. ಈ ಐವರೂ ಮಲೆಯಾಳಿಗಳು. ಕೊನೆಯ, ಆದರೆ ಪ್ರಮುಖ ವ್ಯಕ್ತಿ ಅಂದರೆ ಶಂಕರ್. ಕಾರಣ, ನಮ್ಮ ಗುಂಪಿನಲ್ಲಿ ತಮಿಳು ಬರುತ್ತಿದ್ದ ಏಕೈಕ ವ್ಯಕ್ತಿ + ಅವನು ಚೆನ್ನೈ ನಿವಾಸಿ. ಶೀಗೆ ಐವರು ಮಲೆಯಾಳಿಗಳು (ಅವರ ರೀತಿಯಲ್ಲೇ ಹೇಳುವಂತೆ, ಮಲ್ಲುಗಳು) + ಒಬ್ಬ ತಮಿಳಿಗ + ಇಬ್ಬರು ಕನ್ನಡಿಗರ ಗುಂಪು - ೨ ತಿಂಗಳ ಹಿಂದೆ ಒಬ್ಬರಿಗೊಬ್ಬರು ಅಪರಿಚಿತರಾಗಿದ್ದವರು, ಅಂದು ಒಂದೇ ದೋಣಿಯಲ್ಲಿ, ಒಂದೇ ಗುರಿಯತ್ತ (ಅಜ್ಞಾತ?!) ಹೊರಟಿದ್ದೆವು. ಹೊರಟು ಅರ್ಧ ಘಂಟೆಯಾಯಿತು. ಹೊರಡುವ ಗಡಿಬಿಡಿಯಲ್ಲಿ ಮೂಲೆ ಸೇರಿದ್ದ ಹಸಿವು ಭುಗಿಲೆದ್ದಿತು. ನನ್ನನ್ನು ಬಿಟ್ಟು ಎಲ್ಲರೂ ರೈಲ್ವೆ ಕ್ಯಾಂಟೀನ್‍ನ ಊಟ, ಬ್ರೆಡ್-ಆಮ್ಲೆಟ್, ನೂಡಲ್ಸ್ ಕೊಂದುಕೊಂದರು. ನಾನು ಅಮ್ಮ ಕೊಟ್ಟಿದ್ದ ಬುತ್ತಿ ಬಿಚ್ಚಿದೆ - ನನ್ನ ನೆಚ್ಚಿನ ಅಕ್ಕಿ ರೊಟ್ಟಿ ಅವರೆಕಾಳು ಉಸಲಿ. ಅವರೆಕಾಳಿನ ವಾಸನೆ, ಉಳಿದವರೆಲ್ಲರನ್ನೂ ನನ್ನೆಡೆಗೆ ಸೆಳೆದು ತಂದಿತು. ಅವರ್ಯಾರೂ ಅಕ್ಕಿರೊಟ್ಟೀ, ಉಸಲಿ ರುಚಿ ನೋಡಿದವರಲ್ಲ. ತಾವು ಕೊಂಡ ಊಟ ಪಕ್ಕಕ್ಕೆ ತಳ್ಳಿ, ನನ್ನ ಬುತ್ತಿಗೆ ಕೈ ಹಾಕಿದರು. ಅದೃಷ್ಟವಶಾತ್ ಅಮ್ಮ ನಾಲ್ವರಿಗಾಗುವಷ್ಟು ಬುತ್ತಿ ಕಟ್ಟಿದ್ದರು. ಊಟವಾಯಿತು. ಅರ್ಧ ಘಂಟೆಯ ಹರಟೆ ನಂತರ ಒಬ್ಬೊಬ್ಬರೇ ನಿದ್ದೆಗೆ ಜಾರಿದೆವು. ಓಡುತ್ತಿದ್ದ ಸಮಯದ ಜೊತೆಜೊತೆಗೆ ಒಂದೊಂದೇ ಸ್ಟೇಷನ್‍ಗಳು ಹಿಂದೆ ಸರಿದವು - ಬಂಗಾರಪೇಟೆ, ಕುಪ್ಪಂ, ಹೆಸರು ಗೊತ್ತಿಲ್ಲದ ಹಲವು ಊರುಗಳು...

ತಲೆ ತುಂಬ ಪ್ರಶ್ನೆಗಳಿರುವಾಗ ಎಷ್ಟು ಹೊತ್ತು ತಾನೆ ನಿದ್ದೆ ಮಾಡಲು ಸಾಧ್ಯ. ಒಬ್ಬೊಬ್ಬರೇ ಎದ್ದು ಶಂಕರನ ಮೇಲೆ ಪ್ರಶ್ನೆಗಳ ಸುರಿಮಳೆಗರೆದೆವು. ಆಫ಼ೀಸ್ ಎಲ್ಲಿದೆ ? ರೈಲ್ವೇ ಸ್ಟೇಷನ್‍ನಿಂದ ಎಷ್ಟು ದೂರ? ಅದು-ಇದು ಹೀಗೆ ಒಂದರ ಹಿಂದೊಂದು. ಗೊತ್ತಿದ್ದವನ್ನು ಉತ್ತರಿಸಿ, ಗೊತ್ತಿಲ್ಲದಕ್ಕೆ ಕೈ ತಿರುವಿದ ಆತ. ಸರಿ ಸಮಯ ಕಳೆಯಲು, ಆ ತುದಿಯಿಂದ ಈ ತುದಿಗೆ. ರೈಲಿನ ಈ ತುದಿಯಿಂದ ಆ ತುದಿಗೆ ಎರಡು ಬಾರಿ ಸುತ್ತಿಕ್ಕಿದೆವು. ಸುಮಾರು ರಾತ್ರಿ ೯ರ ಹೊತ್ತಿಗೆ, ಎಂಟೂ ಜನರ ಚಿಗುರುಗನಸುಗಳನ್ನು ಹೊತ್ತ ರೈಲು ಚೆನ್ನೈ ತಲುಪಿತು. ಸ್ಟೇಷನ್ ಹತ್ತಿರ ಬಂದಂತೆ ನಮ್ಮ ಲಗೇಜುಗಳನ್ನು ಜೋಡಿಸಿಕೊಂಡು ಇಳಿಯಲು ಸಿದ್ಧವಾದೆವು. ಚೆನ್ನೈನ ಸೆಂಟ್ರಲ್ ನಿಲ್ದಾಣಾದಲ್ಲಿ ರೈಲು ನಿಂತಿತು. ನಾವಿದ್ದ ಎಸಿ ಕಂಪಾರ್ಟ್‍ಮೆಂಟ್‍ನ ಬಾಗಿಲು ತೆಗೆಯುತಿದ್ದಂತೆ, ಫ್ರಿಡ್ಜ್‍ನ ಫ್ರೀಜ಼ರ್‌ನಿಂದ ಒಮ್ಮೆಲೇ ಬಾಣಲೆಗೆ ಹಾಕಿದಂತಾಯಿತು. ಮದರಾಸಿನ ಧಗೆ ಕುಹಕನಗೆ ಬೀರುತ್ತ 'ಚೆನ್ನೈಗೆ ಸುಸ್ವಾಗತ' ಎನ್ನುತ್ತಿತ್ತು. ನಮ್ಮೆಲ್ಲರ ಲಗೇಜುಗಳನ್ನು ಹೊರಲಾರದೆ ಹೊತ್ತುಕೊಂಡು, ಎಳೆಯಲಾರದೆ ಎಳೆದುಕೊಂಡು ಮುಖ್ಯದ್ವಾರದ ಕಡೆ ಹತ್ತು ಹೆಜ್ಜೆ ಇಡುತ್ತಿದ್ದಂತೆ ಎಲ್ಲರ ಮನದಲ್ಲೂ ಧುತ್ತೆಂದು ಪ್ರಶ್ನೆ ಎದ್ದಿತು -- ಮುಂದೆ ಎಲ್ಲಿಗೆ ?? ಯಾರ ಬಳಿಯಲ್ಲೂ ಆಫ಼ೀಸ್ ವಿಳಾಸವಾಗಲಿ ಕಂಪೆನಿ ಗೆಸ್ಟ್‍ಹೌಸ್ ವಿಳಾಸವಾಗಲಿ ಇಲ್ಲ. ಕೈಲಿದ್ದ ಲಗೇಜುಅಲ್ಲೇ ಹಾಕಿ ಪೆಚ್ಚು ಮುಖ ಮಾಡಿ ಕುಳಿತೆವು. ಎರಡು-ಮೂರು ನಿಮಿಷ ಎಲ್ಲರ ಪ್ರತಿಕ್ರಿಯೆ ಸವಿದು(?) ಕೊನೆಗೆ ಕಪಿನಗೆ ಬೀರುತ್ತ ಜೇಬಿನಿಂದ ಒಂದು ಫ಼ೋನ್ ನಂಬರ್ ತೆಗೆದೆ. ಹಿಂದಿನ ಬೆಂಗಳೂರಿನ ಆಫ಼ೀಸ್‍ನಿಂದ ಹೊರಡುವ ಕೊನೆಘಳಿಗೆಯಲ್ಲಿ ಚೆನ್ನೈನಲ್ಲಿ ರಿಪೋರ್ಟ್ ಮಾಡಿಕೊಳ್ಳಾಬೇಕಾಗಿದ್ದ ಮೇಲಾಧಿಕಾರಿಯ ಮೊಬೈಲ್ ನಂಬರ್ ಗುರುತು ಹಾಕಿಕೊಂಡು ಬಂದಿದ್ದೆ. ಸರಿ ಎದುರಾಗಿದ್ದ ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿತು. ನಮ್ಮೆಲ್ಲರ ಲಗೇಜುಗಳನ್ನು (ಸುಮಾರು ೩೦-೩೫ ಬ್ಯಾಗುಗಳು) ಒಂದು ಕಡೆ ಬೆಟ್ಟದಂತೆ ಗುಡ್ಡೆ ಹಾಕಿ ನಾವು ಆರು ಜನ ಕಾವಲಿಗೆ ನಿಂತೆವು. ಲೋಕಲ್ ಹುಡುಗ ಶಂಕರ್ ಮತ್ತು ವಿಶಿ, ಮೇಲಧಿಕಾರಿ ತೋತಾದ್ರಿಗೆ ಫ಼ೋನ್ ಮಾಡಲು ಎಸ್‍ಟಿಡಿ ಬೂತ್ ಹುಡುಕಿಕೊಂಡು ಹೊರಟರು. ಹೋದ ೩೦ ನಿಮಿಷಗಳ ನಂತರ ಇಬ್ಬರು ಸಿಟಿ ಟ್ಯಾಕ್ಸಿ ಚಾಲಕರ ಜೊತೆ ಮರಳಿದರು. ವಿಳಾಸ ಪಡೆದು, ಟ್ಯಾಕ್ಸಿಗಳ ಜೊತೆ ಅವರು ಬರುವಷ್ಟರಲ್ಲಿ ಅರ್ಧಘಂಟೆಯಾಗಿತ್ತು. ಡ್ರೈವರಣ್ಣ ನಮ್ಮ ಲಗೇಜು ಬೆಟ್ಟಾವನ್ನು ನೋಡಿ, 'ನೀವು ಹೋಗಬೇಕಾಗಿರೋ ಜಾಗ ಊರಾಚೆ ಇದೆ. ಮೀಟರ್ ಮೇಲೆ ೧/೩ರಷ್ಟು ಹೆಚ್ಚಿಗೆ ಕೊಡಬೇಕು' ಅಂದ. ವಿಧಿಯಿಲ್ಲದೆ ಒಪ್ಪಿಕೊಂಡು ಲಗೇಜು ಏರಿಸಿದೆವು. ಎಂಟು ಜನರ ಸವಾರಿ ಕ್ಲಾಸಿಕ್ ಕ್ಲಬ್‍ನೆಡೆಗೆ (ನಮಗೆ ತಾತ್ಕಾಲಿಕ ವಾಸ್ತವ್ಯವಿದ್ದ ಸ್ಥಳ) ಮಂದಗತಿಯಲ್ಲಿ ಹೊರಟಿತು.

ಸೆಂಟ್ರಲ್‍ನಿಂದ ಹೊರಟ ನಮ್ಮ ಮೆರವಣಿಗೆ ಮಂದಗತಿಯಲ್ಲಿ ಬೀಚ್ ರೋಡ್ ತಲುಪಿ (ಮರೀನ ಬೀಚ್), ಟ್ರಿಪ್ಲಿಕೇನ್, ಸ್ಯಾಂಥೋಮ್, ಮಂದವೇಲಿ, ಅಡ್ಯಾರ್, ತಿರುವಾಣ್ಮಿಯೂರ್ ದಾಟಿ ಹಳೆಯ ಮಹಾಬಲಿಪುರಂ ರಸ್ತೆ ಹೊಕ್ಕಿತು. ತೋತಾದ್ರಿಯವರು ಫ಼ೋನ್‍ನಲ್ಲಿ ತಿಳಿಸಿದ್ದ ಪ್ರಕಾರ ತಿರುವಾಣ್ಮಿಯೂರ್‍ನಿಂದ ಕೆಲವೇ ದೂರದಲ್ಲಿ ಬಲ್ಲಕ್ಕೆ ಕ್ಲಾಸಿಕ್ ಕ್ಲಬ್ ಮತ್ತೂ ಮುಂದಕ್ಕೆ ಹೋದರೆ ಎಡಕ್ಕೆ ನಮ್ಮ ಆಫ಼ೀಸು. ಹಳೆಯ ಮಹಾಬಲಿಪುರಂ ರಸ್ತೆ ಹೊಕ್ಕಾಗಲೆ ರಾತ್ರಿ ಹನ್ನೊಂದು ಹೊಡೆದಿತ್ತು. ತಿರುವಾಣ್ಮಿಯೂರ್ ದಾಟಿ ಎರಡು ಕಿ.ಮೀ. ಆಯಿತು, ನಾಲ್ಕಾಯಿತು, ಆಫೀಸೂ ಇಲ್ಲ ಕ್ಲಾಸಿಕ್ ಕ್ಲಬ್ಬೂ ಇಲ್ಲ. ಮತ್ತೆರಡು ಕಿ.ಮೀ. ಸಾಗಿ ಡ್ರೈವರಣ್ಣರಿಬ್ಬರೂ ಒಂದು ಹೋಟೆಲಿನ ಮುಂಡೆ ನಿಲ್ಲಿಸಿ, ಇನ್ನೂ ಮುಂಡೆ ಹೋದರೆ ತಿನ್ನಲು ಯಾವ ಹೋಟೆಲೂ ಸಿಗದು, ತಿನ್ನುವುದಾದರೆ ಇಲ್ಲೇ ತಿನ್ನಿ ಎಂದರು. ಮಧ್ಯಾಹ್ನದ ರೊಟ್ಟೀ ಉಸಲಿ ಯಾವಾಗಲೋ ಅರಗಿ ಹೋಗಿತ್ತು, ಸರಿ ಒಳಕ್ಕೆ ಹೋಗಿ ಕುಳಿತೆವು (ಹೋಟೆಲಿನ ಹೆಸರು ಇನ್ನೂ ನೆನಪಿದೆ - ವಸಂತ ವಿಹಾರ, ಕಂದನ್‍ಚಾವಡಿಯಲ್ಲಿದೆ). ಚೆನ್ನಾಗಿ ಬಾಯಾರಿಕೆಯಾಗಿತ್ತು, ಲೋಟಗಳಾನ್ನೆತ್ತಿ ಗಟಗಟ ಗಂಟಲಿಗೆ ನೀರು ಸುರಿದುಕೊಂಡೆವು. ಅರೆಕ್ಷಣದಲ್ಲೇ ಎಲ್ಲರ ಬಾಯಲ್ಲಿದ್ದ ನೀರು ಮತ್ತೆ ಲೋಟಕ್ಕೆ ಮರಳಿತ್ತು - ಶಂಕರನೊಬ್ಬನನ್ನು ಬಿಟ್ಟು. ನೀರೋ ಉಪ್ಪೋ-ಉಪ್ಪು. ಕಿಸಕ್ಕನೆ ನಕ್ಕು ಶಂಕರನೆಂದ - ವೆಲ್‍ಕಮ್ ಟು ಚೆನ್ನೈ. ಹಿಂದೆಯೇ ಮಾಣಿ ಬಂದು ರಾತ್ರಿ ಹನ್ನೊಂದರಲ್ಲಿ ಉಳಿದಿದ್ದ ತಿಂಡಿಗಳಾ ಪಟ್ಟೀ ಒದರಿದ - ಖಾಲಿ ದೋಸೆ, ಮಸಾಲೆ ದೋಸೆ, ತುಪ್ಪದ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಆ ದೋಸೆ, ಈ ದೋಸೆ, ಇಡ್ಲಿ, ಚೆಟ್ಟಿನಾಡು ಇಡ್ಲಿ, ಖುಷ್ಬೂ ಇಡ್ಲಿ (ಕೇಳಿದ್ದರಾ ಈ ಹೆಸರನ್ನು!!). ಸರಿ ಯಾವುದೋ ಒಂದು ದೋಸೆ ಕೊಡಪ್ಪ ಅಂದು, ಶ್ರೀರಾಮಕೃಷ್ಣಾರ್ಪಣಮಸ್ತು ಎನುತ್ತ ಹೊಟ್ಟೆಗೆ ದೋಸೆ-ಇಡ್ಲಿ ಸಮರ್ಪಿಸಿ, ಉಪ್ಪು ನೀರನ್ನು ತುಟಿಗೆ ತಾಗಿಸಲಾರದೆ Maaza ಕುಡಿದು ಹೊರಬಿದ್ದೆವು.

ನಮ್ಮ ರಥಗಳನ್ನೇರಿ ಮತ್ತೂ ೫-೬ ಕಿ.ಮೀ. ಸಾಗಿದಾಗ, ಇದ್ದಕ್ಕಿದ್ದಂತೆ ಯಾರೋ ಕೂಗಿದರು, 'ಆಫ಼ೀಸ್ ಬಂತು, ಆಫ಼ೀಸ್ ಬಂತು' ಅಂತ. ಆಗಲೇ ನಾವು ಆಫೀಸ್ ತಲುಪಿದ್ದಾದರೆ ಕ್ಲಬ್ ಎಲ್ಲಿ ? ಸರಿ U turn ತೆಗೆದುಕೊಂಡು ಸುಮಾರು ಒಂದು ಕಿ.ಮೀ ವಾಪಸ ಬಂದಾಗ ರಸ್ತೆ ಬದಿಯಲ್ಲಿ ಒಂದು ಸಣ್ಣ ಬೋರ್ಡ್ ಕಂಡಿತು. ಅಲ್ಲಿ ಆ ಸಣ್ಣ ರಸ್ತೆಗೆ ತಿರುಗಿ ಮತ್ತೂ ಒಂದು ಕಿ.ಮೀ. ಸಾಗಿದಾಗ ನಮ್ಮ ಒಂದು ವಾರದ ಮನೆ ಕಂಡಿತು (ಆಫ಼ೀಸ್‍ನಿಂದ ಒಂದು ವಾರದ ಮಟ್ಟಿಗೆ ವ್ಯವಸ್ಥೆಯಿತ್ತು). ತೋತಾದ್ರಿಯವರು ಫೋನಾಯಿಸಿ ತಿಳಿಸಿದ್ದರೇನೋ, ಮ್ಯಾನೇಜರ್ ತಾತ ನಮಗಾಗಿ ಕಾಯುತ್ತ ಕುಳಿತಿದ್ದರು. ಸರಸರನೆ ನಮ್ಮ ವಿವರಗಳನ್ನು ರಿಜಿಸ್ಟರ್‍ನಲ್ಲಿ ಗೀಚಿ, ರೂಮು ಸೇರಿ ಹಾಸಿಗೆಗೆ ಮೈಯೊಡ್ಡಿದಾಗ ಮಧ್ಯರಾತ್ರಿ ದಾಟಿತ್ತು. ನಾಳಿನ ಚಿಂತೆಯಿಲ್ಲದೆ ನಿದ್ರಾದೇವಿ ಕೈಬೀಸಿ ಕರೆಯುತ್ತಿದ್ದಳು.

~ಮಾ.ಪ್ರಶಾಂತ

Friday, December 30, 2005

ತೊದಲ್ನುಡಿ


ತೊದಲ್ನುಡಿ -
ರಾಷ್ಟ್ರಕವಿಯ ಜನ್ಮಶತಮಾನೋತ್ಸವದ ನೆನಪಾಗಿ ಅವರಿಗೇ ಅರ್ಪಿತ ಈ ನಮ್ಮ ಕನ್ನಡಕಸ್ತೂರಿ ಬ್ಲಾಗ್. ಅವರೇ ಹೇಳಿದಂತೆ "ಎಲ್ಲಾದರೂ ಇರು ಎಂತಾದರೂ ಇರು ಎಂದೆಂದೂ ನೀ ಕನ್ನಡವಾಗಿರು"- ಇದು ನಮ್ಮ-ನಿಮ್ಮೆಲ್ಲರ ಮೂಲಮಂತ್ರವಾಗಲೆಂಬುದೇ ನಮ್ಮ ಆಶಯ.
ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡಕ್ಕೋಸ್ಕರವೇ ಈ ನಮ್ಮ ಕಿರು ಪ್ರಯತ್ನ - "ಕನ್ನಡ ಕಸ್ತೂರಿ"

ಕುವೆಂಪುರವರ ಕವಿತೆ, ನಾಡಗೀತೆಯಿಂದಲೇ ಪ್ರಾರಂಭಿಸುತ್ತಿದ್ದೇವೆ ಈ ನಮ್ಮ ಕನ್ನಡದ ಕಿರು ಸೇವೆಯನ್ನು.

ಬನ್ನಿ ನೀವೂ ಕೈ ಜೋಡಿಸಿ...

ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ ಜಯ ಹೇ ರಸ ಋಶಿಗಳ ಬೀಡೆ
ಭೂ ದೇ"ಯ ಮಕುಟದ ನವ ಮಣಿಯೆ ಗಂಧದ ಚಣ್ದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ

ತೈಲಪ ಹೊಯ್ಸಳರಾಳಿದ ನಾಡೆ ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ "ವೇಕರ ಭಾರತ ಜನನಿಯ ತನುಜಾತೆ

ಶಂಕರ ರಾಮಾನುಜ "ದ್ಯಾರಣ್ಯ ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಶಡಕ್ಷರಿ ಪೊನ್ನ ಪಂಪ ಲಕು"ಪತಿ ಜನ್ನ
ಕಬ್ಬಿಗನುದಿಸಿದ ಮಂಗಳ ಧಾಮ ಕ" ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ ಭಾರತ ಜನನಿಯ ತನುಜಾತೆ

ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ದೇಹ ಕನ್ನಡ ತಾಯ ಮಕ್ಕಳ ಗೇಹ
ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೇ

-ಕುವೆಂಪು