Monday, January 16, 2006

ಮದರಾಸಿನಲ್ಲಿನ ಮೊದಲ ದಿನ

ಮೂರು ವರ್ಷದ ನನ್ನ ಹಿಂದಿನ ನೆನಪುಗಳನ್ನು ಕೆದಕಿ ಈ ಪ್ರವಾಸ ಕಥಾನಕವನ್ನು ಬರೆದಿದ್ದೇನೆ. ಬರವಣೀಗೆಯಲ್ಲಿ ಇದು ನನ್ನ ಮೊದಲ ಪ್ರಯ್ತ್ನ.
ನಿಮ್ಮ ಅನಿಸಿಕೆಗಳನ್ನು ತಿಳಿಸಿ
-----

ಜನವರಿ ೧೫ ೨೦೦೩, ಬುಧವಾರ, ಹೊಸದೊಂದು ಪಯಣಕ್ಕೆ ಸಜ್ಜಾಗುತ್ತಿದ್ದೆ. ಗೊತ್ತಿಲ್ಲದೂರಿಗೆ, ಹೊಸ ಬದುಕನ್ನು (ಅಥವಾ ಬದುಕಿನ ಹೊಸ ಅಧ್ಯಾಯವನ್ನು) ಎದುರಿಸುತ್ತ ಹೊರಡುತ್ತಿದ್ದೆ - ಒಬ್ಬಂಟಿ. ಬಹುಶಃ ಅದೇ ಮೊದಲು, ಇಂದಿನ ತನಕ ಅದೇ ಕೊನೆ -- ಅಮ್ಮ, ಅಣ್ಣ, ಅಕ್ಕ - ಎಲ್ಲರೂ ನನ್ನನ್ನು ಬೀಳ್ಕೊಡಲು ರೈಲ್ವೇ ಸ್ಟೇಷನ್‍ಗೆ ಬಂದದ್ದು. ಜೊತೆಗೆ ನನ್ನ ಕಾಲೇಜಿನ ಪಟಾಲಂ - ಶ್ರೇಯಸ್, ರಘು, ಅಭಿ, ಶ್ಯಾಮ - ಕೂಡ ಹಾಜರ್, ಬೀಳ್ಕೊಡಲು. ಮುಂದೇನು? ಅಲ್ಲೆಷ್ಟು ದಿನ ವಾಸ್ತವ್ಯ? ತಿಂಗಳುಗಳೇ? ವರ್ಷವೇ? ೨-೩ ವರ್ಷಗಳೇ? - ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹೊತ್ತು ಸಮಯಕ್ಕೆ ಸರಿಯಾಗಿ ಸಿಳ್ಳೆ ಹಾಕುತ್ತ ಬೃಂದಾವನ್ ಎಕ್ಸ್‍ಪ್ರೆಸ್ಸ್ ಮದರಾಸಿನ ಕಡೆ ಹೊರಟಿತು. ಕೊನೆಗೂ ಚಂದ್ರಮೌಳಿ ಅಣ್ಣರ (ನಮ್ಮ ಫ್ಯಾಮಿಲಿ ಫ್ರೆಂಡ್ - ಕುಟುಂಬದ ಸ್ನೇಹಿತರು) ಭವಿಷ್ಯ ನಿಜವಾಗಿತ್ತು. ನಾನು ಬಿ. ಇ. ಎರಡನೇ ಸೆಮಿಸ್ಟೆರ್‌ನಲ್ಲಿದ್ದಾಗ ಅವರೊಮ್ಮೆ ಹೇಲಿದ್ದರು - "ಎಲ್ಲರೂ ಕೆರಿಯರ್/ಕೆಲಸ ಅಂತ ಪಶ್ಚಿಮಕ್ಕೆ ಹೋದರೆ, ನೀನು ಪೂರ್ವಕ್ಕೆ ಹೋಗ್ತೀಯಾ" ಅಂತ. ಸರಿ, ಸುಮಾರು ಮೂರು ವರ್ಷಗಳ ತನಕ ಮನದಲ್ಲೇ ಮಂಡಿಗೆ ಮೆದ್ದಿದ್ದೆ - ಸಿಂಗಾಪುರ, ಆಸ್ಟ್ರೇಲಿಯಾ, ನ್ಯೂಜ಼ೀಲ್ಯಾಂಡ್ ಅಂತ. ಕೊನೆಗೆ ನೋಡಿದರೆ ಪೂರ್ವದಲ್ಲಿಯೇ ಇರುವ ಮದ್ರಾಸಿಗೆ ಹೊರಟಿದ್ದೆ.

ಈ ಮೂರು-ನಾಲ್ಕು ತಿಂಗಳುಗಳಲ್ಲಿ ನಡೆದ ಘಟನಾವಳಿಗಳು ಊಹಿಸದಲೂ ಆಗದಂತೆ ನನ್ನನ್ನು ಕುಣಿಗಲ್‍ನಿಂದ - ಬೆಂಗಳೂರು - ಚೆನ್ನೈಗೆ ರವಾನಿಸುತ್ತಿದ್ದವು. ಇನ್‍ಫ಼ೋಸಿಸ್ ನಲ್ಲಿ ಕೆಲಸ ಸಿಕ್ಕಿ, ನವೆಂಬರ್, ೨೦೦೨ ನಲ್ಲಿ ಸೇರಿ, ಸುಮಾರು ಎರಡು ತಿಂಗಳುಗಳ ಟ್ರೈನಿಂಗ್ ಮುಗಿಸಿ ೧೨೦ ಜನರ ಟ್ರೈನಿಂಗ್ ಗುಂಪಿನಿಂದ ಎಂಟು ಜನ ಭವಿಷ್ಯವನ್ನರಸುತ್ತ ಹೊರಟಿದ್ದೆವು. ಉಳಿದ ಏಳು ಜನರಲ್ಲಿ ಒಬ್ಬನೇ ಕನ್ನಡಿಗ - ವಿಶ್ವನಾಥ್ ನಿರಾಕರಿ. ನನ್ನಂತೆಯೇ ಅವನಿಗೂ ತಮಿಳು ಬರುತ್ತಿರಲಿಲ್ಲ. ಉಳಿದವರೆಂದರೆ ಚೆರಿಯನ್ - ಸೇರಿದ ಆರು ತಿಂಗಳಲ್ಲೇ ಕೆಲಸ ಬಿಟ್ಟ ಆಸಾಮಿ. ರೆನಿ ಅಬ್ರಹಾಂ - ಯಾವ ಊರಿಗೇ ಹೋದರೂ ಅಲ್ಲಿಯ ಮ್ಯಾಪ್ ಪಡೆದು ಊರೆಲ್ಲ ಸುತ್ತಾಡುವವ. ಮೊಹಮ್ಮದ್ ಬಷೀರ್ - ನಮ್ಮ ಗುಂಪಿನ ಮಿತಭಾಷಿ. ಮನು ಬಿ. ಚಂದ್ರನ್, ೬ ತಿಂಗಳು ನಂತರ ತಿರುವನಂತಪುರಕ್ಕೆ ವರ್ಗ ಪಡೆದವ - Mr. Always-need-a-doctor, ಯಾವಾಗ ನೋಡಿದರೂ ಒಂದಲ್ಲ ಒಂದು ತೊಂದರೆ. ಚೆನ್ನೈನಲ್ಲಿದ್ದ ೬ ತಿಂಗಳುಗಳಲ್ಲಿ, ೨ ತಿಂಗಳು ಜಾಂಡೀಸ್‍ನಿಂದಾಗಿ ರೆಸ್ಟ್, ಮತ್ತೆರಡು ತಿಂಗಳು ಕಾಲು ಫ್ರಾಕ್ಚರ್‍ಆಗಿ ರೆಸ್ಟ್. ನಮ್ಮ ಗುಂಪಲ್ಲಿದ್ದ ಏಕೈಕ ಹುಡುಗಿ - ಫ಼ರೀನ್ ಅಜ಼ೀಜ಼್, ಅದೇನು ಊರಲ್ಲಿದ್ದ ಅವಳ ಸಾಮಾನುಗಳೇಲ್ಲವನ್ನೂ ತಂದಿದ್ದಳೇನೋ? ನಮ್ಮ ಏಳು ಜನರ ಲಗೇಜು == ಅವಳೊಬ್ಬಳ ಲಗೇಜು, ಅಷ್ಟಿತ್ತು. ಈ ಐವರೂ ಮಲೆಯಾಳಿಗಳು. ಕೊನೆಯ, ಆದರೆ ಪ್ರಮುಖ ವ್ಯಕ್ತಿ ಅಂದರೆ ಶಂಕರ್. ಕಾರಣ, ನಮ್ಮ ಗುಂಪಿನಲ್ಲಿ ತಮಿಳು ಬರುತ್ತಿದ್ದ ಏಕೈಕ ವ್ಯಕ್ತಿ + ಅವನು ಚೆನ್ನೈ ನಿವಾಸಿ. ಶೀಗೆ ಐವರು ಮಲೆಯಾಳಿಗಳು (ಅವರ ರೀತಿಯಲ್ಲೇ ಹೇಳುವಂತೆ, ಮಲ್ಲುಗಳು) + ಒಬ್ಬ ತಮಿಳಿಗ + ಇಬ್ಬರು ಕನ್ನಡಿಗರ ಗುಂಪು - ೨ ತಿಂಗಳ ಹಿಂದೆ ಒಬ್ಬರಿಗೊಬ್ಬರು ಅಪರಿಚಿತರಾಗಿದ್ದವರು, ಅಂದು ಒಂದೇ ದೋಣಿಯಲ್ಲಿ, ಒಂದೇ ಗುರಿಯತ್ತ (ಅಜ್ಞಾತ?!) ಹೊರಟಿದ್ದೆವು. ಹೊರಟು ಅರ್ಧ ಘಂಟೆಯಾಯಿತು. ಹೊರಡುವ ಗಡಿಬಿಡಿಯಲ್ಲಿ ಮೂಲೆ ಸೇರಿದ್ದ ಹಸಿವು ಭುಗಿಲೆದ್ದಿತು. ನನ್ನನ್ನು ಬಿಟ್ಟು ಎಲ್ಲರೂ ರೈಲ್ವೆ ಕ್ಯಾಂಟೀನ್‍ನ ಊಟ, ಬ್ರೆಡ್-ಆಮ್ಲೆಟ್, ನೂಡಲ್ಸ್ ಕೊಂದುಕೊಂದರು. ನಾನು ಅಮ್ಮ ಕೊಟ್ಟಿದ್ದ ಬುತ್ತಿ ಬಿಚ್ಚಿದೆ - ನನ್ನ ನೆಚ್ಚಿನ ಅಕ್ಕಿ ರೊಟ್ಟಿ ಅವರೆಕಾಳು ಉಸಲಿ. ಅವರೆಕಾಳಿನ ವಾಸನೆ, ಉಳಿದವರೆಲ್ಲರನ್ನೂ ನನ್ನೆಡೆಗೆ ಸೆಳೆದು ತಂದಿತು. ಅವರ್ಯಾರೂ ಅಕ್ಕಿರೊಟ್ಟೀ, ಉಸಲಿ ರುಚಿ ನೋಡಿದವರಲ್ಲ. ತಾವು ಕೊಂಡ ಊಟ ಪಕ್ಕಕ್ಕೆ ತಳ್ಳಿ, ನನ್ನ ಬುತ್ತಿಗೆ ಕೈ ಹಾಕಿದರು. ಅದೃಷ್ಟವಶಾತ್ ಅಮ್ಮ ನಾಲ್ವರಿಗಾಗುವಷ್ಟು ಬುತ್ತಿ ಕಟ್ಟಿದ್ದರು. ಊಟವಾಯಿತು. ಅರ್ಧ ಘಂಟೆಯ ಹರಟೆ ನಂತರ ಒಬ್ಬೊಬ್ಬರೇ ನಿದ್ದೆಗೆ ಜಾರಿದೆವು. ಓಡುತ್ತಿದ್ದ ಸಮಯದ ಜೊತೆಜೊತೆಗೆ ಒಂದೊಂದೇ ಸ್ಟೇಷನ್‍ಗಳು ಹಿಂದೆ ಸರಿದವು - ಬಂಗಾರಪೇಟೆ, ಕುಪ್ಪಂ, ಹೆಸರು ಗೊತ್ತಿಲ್ಲದ ಹಲವು ಊರುಗಳು...

ತಲೆ ತುಂಬ ಪ್ರಶ್ನೆಗಳಿರುವಾಗ ಎಷ್ಟು ಹೊತ್ತು ತಾನೆ ನಿದ್ದೆ ಮಾಡಲು ಸಾಧ್ಯ. ಒಬ್ಬೊಬ್ಬರೇ ಎದ್ದು ಶಂಕರನ ಮೇಲೆ ಪ್ರಶ್ನೆಗಳ ಸುರಿಮಳೆಗರೆದೆವು. ಆಫ಼ೀಸ್ ಎಲ್ಲಿದೆ ? ರೈಲ್ವೇ ಸ್ಟೇಷನ್‍ನಿಂದ ಎಷ್ಟು ದೂರ? ಅದು-ಇದು ಹೀಗೆ ಒಂದರ ಹಿಂದೊಂದು. ಗೊತ್ತಿದ್ದವನ್ನು ಉತ್ತರಿಸಿ, ಗೊತ್ತಿಲ್ಲದಕ್ಕೆ ಕೈ ತಿರುವಿದ ಆತ. ಸರಿ ಸಮಯ ಕಳೆಯಲು, ಆ ತುದಿಯಿಂದ ಈ ತುದಿಗೆ. ರೈಲಿನ ಈ ತುದಿಯಿಂದ ಆ ತುದಿಗೆ ಎರಡು ಬಾರಿ ಸುತ್ತಿಕ್ಕಿದೆವು. ಸುಮಾರು ರಾತ್ರಿ ೯ರ ಹೊತ್ತಿಗೆ, ಎಂಟೂ ಜನರ ಚಿಗುರುಗನಸುಗಳನ್ನು ಹೊತ್ತ ರೈಲು ಚೆನ್ನೈ ತಲುಪಿತು. ಸ್ಟೇಷನ್ ಹತ್ತಿರ ಬಂದಂತೆ ನಮ್ಮ ಲಗೇಜುಗಳನ್ನು ಜೋಡಿಸಿಕೊಂಡು ಇಳಿಯಲು ಸಿದ್ಧವಾದೆವು. ಚೆನ್ನೈನ ಸೆಂಟ್ರಲ್ ನಿಲ್ದಾಣಾದಲ್ಲಿ ರೈಲು ನಿಂತಿತು. ನಾವಿದ್ದ ಎಸಿ ಕಂಪಾರ್ಟ್‍ಮೆಂಟ್‍ನ ಬಾಗಿಲು ತೆಗೆಯುತಿದ್ದಂತೆ, ಫ್ರಿಡ್ಜ್‍ನ ಫ್ರೀಜ಼ರ್‌ನಿಂದ ಒಮ್ಮೆಲೇ ಬಾಣಲೆಗೆ ಹಾಕಿದಂತಾಯಿತು. ಮದರಾಸಿನ ಧಗೆ ಕುಹಕನಗೆ ಬೀರುತ್ತ 'ಚೆನ್ನೈಗೆ ಸುಸ್ವಾಗತ' ಎನ್ನುತ್ತಿತ್ತು. ನಮ್ಮೆಲ್ಲರ ಲಗೇಜುಗಳನ್ನು ಹೊರಲಾರದೆ ಹೊತ್ತುಕೊಂಡು, ಎಳೆಯಲಾರದೆ ಎಳೆದುಕೊಂಡು ಮುಖ್ಯದ್ವಾರದ ಕಡೆ ಹತ್ತು ಹೆಜ್ಜೆ ಇಡುತ್ತಿದ್ದಂತೆ ಎಲ್ಲರ ಮನದಲ್ಲೂ ಧುತ್ತೆಂದು ಪ್ರಶ್ನೆ ಎದ್ದಿತು -- ಮುಂದೆ ಎಲ್ಲಿಗೆ ?? ಯಾರ ಬಳಿಯಲ್ಲೂ ಆಫ಼ೀಸ್ ವಿಳಾಸವಾಗಲಿ ಕಂಪೆನಿ ಗೆಸ್ಟ್‍ಹೌಸ್ ವಿಳಾಸವಾಗಲಿ ಇಲ್ಲ. ಕೈಲಿದ್ದ ಲಗೇಜುಅಲ್ಲೇ ಹಾಕಿ ಪೆಚ್ಚು ಮುಖ ಮಾಡಿ ಕುಳಿತೆವು. ಎರಡು-ಮೂರು ನಿಮಿಷ ಎಲ್ಲರ ಪ್ರತಿಕ್ರಿಯೆ ಸವಿದು(?) ಕೊನೆಗೆ ಕಪಿನಗೆ ಬೀರುತ್ತ ಜೇಬಿನಿಂದ ಒಂದು ಫ಼ೋನ್ ನಂಬರ್ ತೆಗೆದೆ. ಹಿಂದಿನ ಬೆಂಗಳೂರಿನ ಆಫ಼ೀಸ್‍ನಿಂದ ಹೊರಡುವ ಕೊನೆಘಳಿಗೆಯಲ್ಲಿ ಚೆನ್ನೈನಲ್ಲಿ ರಿಪೋರ್ಟ್ ಮಾಡಿಕೊಳ್ಳಾಬೇಕಾಗಿದ್ದ ಮೇಲಾಧಿಕಾರಿಯ ಮೊಬೈಲ್ ನಂಬರ್ ಗುರುತು ಹಾಕಿಕೊಂಡು ಬಂದಿದ್ದೆ. ಸರಿ ಎದುರಾಗಿದ್ದ ದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿತು. ನಮ್ಮೆಲ್ಲರ ಲಗೇಜುಗಳನ್ನು (ಸುಮಾರು ೩೦-೩೫ ಬ್ಯಾಗುಗಳು) ಒಂದು ಕಡೆ ಬೆಟ್ಟದಂತೆ ಗುಡ್ಡೆ ಹಾಕಿ ನಾವು ಆರು ಜನ ಕಾವಲಿಗೆ ನಿಂತೆವು. ಲೋಕಲ್ ಹುಡುಗ ಶಂಕರ್ ಮತ್ತು ವಿಶಿ, ಮೇಲಧಿಕಾರಿ ತೋತಾದ್ರಿಗೆ ಫ಼ೋನ್ ಮಾಡಲು ಎಸ್‍ಟಿಡಿ ಬೂತ್ ಹುಡುಕಿಕೊಂಡು ಹೊರಟರು. ಹೋದ ೩೦ ನಿಮಿಷಗಳ ನಂತರ ಇಬ್ಬರು ಸಿಟಿ ಟ್ಯಾಕ್ಸಿ ಚಾಲಕರ ಜೊತೆ ಮರಳಿದರು. ವಿಳಾಸ ಪಡೆದು, ಟ್ಯಾಕ್ಸಿಗಳ ಜೊತೆ ಅವರು ಬರುವಷ್ಟರಲ್ಲಿ ಅರ್ಧಘಂಟೆಯಾಗಿತ್ತು. ಡ್ರೈವರಣ್ಣ ನಮ್ಮ ಲಗೇಜು ಬೆಟ್ಟಾವನ್ನು ನೋಡಿ, 'ನೀವು ಹೋಗಬೇಕಾಗಿರೋ ಜಾಗ ಊರಾಚೆ ಇದೆ. ಮೀಟರ್ ಮೇಲೆ ೧/೩ರಷ್ಟು ಹೆಚ್ಚಿಗೆ ಕೊಡಬೇಕು' ಅಂದ. ವಿಧಿಯಿಲ್ಲದೆ ಒಪ್ಪಿಕೊಂಡು ಲಗೇಜು ಏರಿಸಿದೆವು. ಎಂಟು ಜನರ ಸವಾರಿ ಕ್ಲಾಸಿಕ್ ಕ್ಲಬ್‍ನೆಡೆಗೆ (ನಮಗೆ ತಾತ್ಕಾಲಿಕ ವಾಸ್ತವ್ಯವಿದ್ದ ಸ್ಥಳ) ಮಂದಗತಿಯಲ್ಲಿ ಹೊರಟಿತು.

ಸೆಂಟ್ರಲ್‍ನಿಂದ ಹೊರಟ ನಮ್ಮ ಮೆರವಣಿಗೆ ಮಂದಗತಿಯಲ್ಲಿ ಬೀಚ್ ರೋಡ್ ತಲುಪಿ (ಮರೀನ ಬೀಚ್), ಟ್ರಿಪ್ಲಿಕೇನ್, ಸ್ಯಾಂಥೋಮ್, ಮಂದವೇಲಿ, ಅಡ್ಯಾರ್, ತಿರುವಾಣ್ಮಿಯೂರ್ ದಾಟಿ ಹಳೆಯ ಮಹಾಬಲಿಪುರಂ ರಸ್ತೆ ಹೊಕ್ಕಿತು. ತೋತಾದ್ರಿಯವರು ಫ಼ೋನ್‍ನಲ್ಲಿ ತಿಳಿಸಿದ್ದ ಪ್ರಕಾರ ತಿರುವಾಣ್ಮಿಯೂರ್‍ನಿಂದ ಕೆಲವೇ ದೂರದಲ್ಲಿ ಬಲ್ಲಕ್ಕೆ ಕ್ಲಾಸಿಕ್ ಕ್ಲಬ್ ಮತ್ತೂ ಮುಂದಕ್ಕೆ ಹೋದರೆ ಎಡಕ್ಕೆ ನಮ್ಮ ಆಫ಼ೀಸು. ಹಳೆಯ ಮಹಾಬಲಿಪುರಂ ರಸ್ತೆ ಹೊಕ್ಕಾಗಲೆ ರಾತ್ರಿ ಹನ್ನೊಂದು ಹೊಡೆದಿತ್ತು. ತಿರುವಾಣ್ಮಿಯೂರ್ ದಾಟಿ ಎರಡು ಕಿ.ಮೀ. ಆಯಿತು, ನಾಲ್ಕಾಯಿತು, ಆಫೀಸೂ ಇಲ್ಲ ಕ್ಲಾಸಿಕ್ ಕ್ಲಬ್ಬೂ ಇಲ್ಲ. ಮತ್ತೆರಡು ಕಿ.ಮೀ. ಸಾಗಿ ಡ್ರೈವರಣ್ಣರಿಬ್ಬರೂ ಒಂದು ಹೋಟೆಲಿನ ಮುಂಡೆ ನಿಲ್ಲಿಸಿ, ಇನ್ನೂ ಮುಂಡೆ ಹೋದರೆ ತಿನ್ನಲು ಯಾವ ಹೋಟೆಲೂ ಸಿಗದು, ತಿನ್ನುವುದಾದರೆ ಇಲ್ಲೇ ತಿನ್ನಿ ಎಂದರು. ಮಧ್ಯಾಹ್ನದ ರೊಟ್ಟೀ ಉಸಲಿ ಯಾವಾಗಲೋ ಅರಗಿ ಹೋಗಿತ್ತು, ಸರಿ ಒಳಕ್ಕೆ ಹೋಗಿ ಕುಳಿತೆವು (ಹೋಟೆಲಿನ ಹೆಸರು ಇನ್ನೂ ನೆನಪಿದೆ - ವಸಂತ ವಿಹಾರ, ಕಂದನ್‍ಚಾವಡಿಯಲ್ಲಿದೆ). ಚೆನ್ನಾಗಿ ಬಾಯಾರಿಕೆಯಾಗಿತ್ತು, ಲೋಟಗಳಾನ್ನೆತ್ತಿ ಗಟಗಟ ಗಂಟಲಿಗೆ ನೀರು ಸುರಿದುಕೊಂಡೆವು. ಅರೆಕ್ಷಣದಲ್ಲೇ ಎಲ್ಲರ ಬಾಯಲ್ಲಿದ್ದ ನೀರು ಮತ್ತೆ ಲೋಟಕ್ಕೆ ಮರಳಿತ್ತು - ಶಂಕರನೊಬ್ಬನನ್ನು ಬಿಟ್ಟು. ನೀರೋ ಉಪ್ಪೋ-ಉಪ್ಪು. ಕಿಸಕ್ಕನೆ ನಕ್ಕು ಶಂಕರನೆಂದ - ವೆಲ್‍ಕಮ್ ಟು ಚೆನ್ನೈ. ಹಿಂದೆಯೇ ಮಾಣಿ ಬಂದು ರಾತ್ರಿ ಹನ್ನೊಂದರಲ್ಲಿ ಉಳಿದಿದ್ದ ತಿಂಡಿಗಳಾ ಪಟ್ಟೀ ಒದರಿದ - ಖಾಲಿ ದೋಸೆ, ಮಸಾಲೆ ದೋಸೆ, ತುಪ್ಪದ ದೋಸೆ, ಈರುಳ್ಳಿ ದೋಸೆ, ರವೆ ದೋಸೆ, ಆ ದೋಸೆ, ಈ ದೋಸೆ, ಇಡ್ಲಿ, ಚೆಟ್ಟಿನಾಡು ಇಡ್ಲಿ, ಖುಷ್ಬೂ ಇಡ್ಲಿ (ಕೇಳಿದ್ದರಾ ಈ ಹೆಸರನ್ನು!!). ಸರಿ ಯಾವುದೋ ಒಂದು ದೋಸೆ ಕೊಡಪ್ಪ ಅಂದು, ಶ್ರೀರಾಮಕೃಷ್ಣಾರ್ಪಣಮಸ್ತು ಎನುತ್ತ ಹೊಟ್ಟೆಗೆ ದೋಸೆ-ಇಡ್ಲಿ ಸಮರ್ಪಿಸಿ, ಉಪ್ಪು ನೀರನ್ನು ತುಟಿಗೆ ತಾಗಿಸಲಾರದೆ Maaza ಕುಡಿದು ಹೊರಬಿದ್ದೆವು.

ನಮ್ಮ ರಥಗಳನ್ನೇರಿ ಮತ್ತೂ ೫-೬ ಕಿ.ಮೀ. ಸಾಗಿದಾಗ, ಇದ್ದಕ್ಕಿದ್ದಂತೆ ಯಾರೋ ಕೂಗಿದರು, 'ಆಫ಼ೀಸ್ ಬಂತು, ಆಫ಼ೀಸ್ ಬಂತು' ಅಂತ. ಆಗಲೇ ನಾವು ಆಫೀಸ್ ತಲುಪಿದ್ದಾದರೆ ಕ್ಲಬ್ ಎಲ್ಲಿ ? ಸರಿ U turn ತೆಗೆದುಕೊಂಡು ಸುಮಾರು ಒಂದು ಕಿ.ಮೀ ವಾಪಸ ಬಂದಾಗ ರಸ್ತೆ ಬದಿಯಲ್ಲಿ ಒಂದು ಸಣ್ಣ ಬೋರ್ಡ್ ಕಂಡಿತು. ಅಲ್ಲಿ ಆ ಸಣ್ಣ ರಸ್ತೆಗೆ ತಿರುಗಿ ಮತ್ತೂ ಒಂದು ಕಿ.ಮೀ. ಸಾಗಿದಾಗ ನಮ್ಮ ಒಂದು ವಾರದ ಮನೆ ಕಂಡಿತು (ಆಫ಼ೀಸ್‍ನಿಂದ ಒಂದು ವಾರದ ಮಟ್ಟಿಗೆ ವ್ಯವಸ್ಥೆಯಿತ್ತು). ತೋತಾದ್ರಿಯವರು ಫೋನಾಯಿಸಿ ತಿಳಿಸಿದ್ದರೇನೋ, ಮ್ಯಾನೇಜರ್ ತಾತ ನಮಗಾಗಿ ಕಾಯುತ್ತ ಕುಳಿತಿದ್ದರು. ಸರಸರನೆ ನಮ್ಮ ವಿವರಗಳನ್ನು ರಿಜಿಸ್ಟರ್‍ನಲ್ಲಿ ಗೀಚಿ, ರೂಮು ಸೇರಿ ಹಾಸಿಗೆಗೆ ಮೈಯೊಡ್ಡಿದಾಗ ಮಧ್ಯರಾತ್ರಿ ದಾಟಿತ್ತು. ನಾಳಿನ ಚಿಂತೆಯಿಲ್ಲದೆ ನಿದ್ರಾದೇವಿ ಕೈಬೀಸಿ ಕರೆಯುತ್ತಿದ್ದಳು.

~ಮಾ.ಪ್ರಶಾಂತ

No comments: