Tuesday, February 07, 2006

ಫಟೀರ್

ಚಳಿಗಾಲ ಬಾಲ್ಯ, ಕೌಮಾರ್ಯ ದಾಟಿ ಯೌವನಕ್ಕೆ ಕಾಲಿಡುತ್ತಿದ್ದ. ನವೆಂಬರ್ ತಿಂಗಳಿನ ಆ ಚಳಿಯಲ್ಲಿ ಮಟಮಟ ಮಧ್ಯಾಹ್ನ ಬಿಸಿಲಲ್ಲಿ ನಡೆಯುವ ಮಜವೇ ಬೇರೆ. ಆ ಶನಿವಾರ ಶಾಲೆ ಮುಗಿಸಿ ಮನೆಗೆ ಹೊರಟಿದ್ದೆ. ಆಗ ತಾನೆ ಸೈಕಲ್ ಕಲಿತು ೪-೫ ತಿಂಗಳುಗಳಾಗಿದ್ದವು. ಶಾಲೆಗೆ ಅಕ್ಕನ ಲೇಡೀಸ್ ಸೈಕಲ್ (BSA SLR) ತೆಗೆದುಕೊಂಡು ಹೋಗುತ್ತಿದ್ದೆ. ಮನೆಯಿಂದ ಶಾಲೆಗೆ ಹೆಚ್ಚೂಕಮ್ಮಿ ಮೂರು ಕಿಮೀ. ಮನೆಯಿದ್ದದ್ದು ಊರಿನ ಉತ್ತರ ತುದಿಯಾದರೆ, ಶಾಲೆ ದಕ್ಷಿಣ ತುದಿ. ನಮ್ಮ ಮನೆಯ ಸುತ್ತುಮುತ್ತಲಿಂದಲೇ ೪-೫ ಜನ ಒಟ್ಟಿಗೆ ಹೋಗುತ್ತಿದ್ದೆವು. ಸೈಕಲ್ ಕಲಿತುದರ ಹೊಸತು, ಜೊತೆಗೆ ನಮ್ಮಲ್ಲೇ ಯಾರು ಬೇಗ ಹೋಗುವರ್‍ಓ ಎಂಬ ಪೈಪೋಟಿ. ಶಾಲೆಗೆ ಹೋಗುವುದು, ಬರುವುದೆಂದರೇ ಮಜವಾಗಿರುತ್ತಿತ್ತು. ಆ ದಿನ ಮಾರ್ನಿಂಗ್ ಕ್ಲಾಸ್ ಮುಗಿಸಿ ಮನೆಗೆ ಹೊರಟಿದ್ದೆ. ಜೊತೆಗೆ ಅದೇನೋ ಒಬ್ಬರೂ ಇರಲ್ಲಿಲ್ಲ. ಮಧ್ಯಾಹ್ನದ ಚಿಗುರು ಬಿಸಿಲಲ್ಲಿ ಹಸಿದ ಹೊಟ್ಟೆ ಹೊತ್ತು ಮನೆ ಕಡೆಗೆ ನಿಧಾನವಾಗಿ ಸಾಗಿದ್ದೆ. ಹೆಚ್ಚೂ ಕಮ್ಮಿ ಮುಕ್ಕಾಲು ಭಾಗ ದಾರಿ ಸವೆಸಿದ್ದೆ, ಧಿಡೀರ್ ಅಂತ ಸೈಕಲ್‍ಗೆ ಬಂದ ಈ 'ಕೆಂಚ'.

ಏನಾಯ್ತು ಮುಂದೆ ಅಂತ ಹೇಳೋಕೆ ಸ್ವಲ್ಪ, ಈ ಕೆಂಚನ ಬ್ಯಾಕ್‍ಗ್ರೌಂಡ್ ಕೊಡೋಣ. ಕೆಂಚ, ಅದು ಅವನ ನಿಜವಾದ ಹೆಸರಲ್ಲ, ಅವನ ಕೂದಲು ಮತ್ತು ಕಣ್ಣಿನ ಬಣ್ಣದಿಂದಾಗಿ ಈ ಅಡ್ಡಹೆಸರು ಬಂದಿತ್ತು. ಅವನ ನಿಜವಾದ ಹೆಸರು, ರೇಣುಕ ಎಂದು - ಈ ಘಟನೆ ನಡೆದ ಎಷ್ಟೋ ವರ್ಷಗಳ ನಂತರ ನನಗೆ ಇದು ತಿಳಿಯಿತು. ನಮ್ಮಮ್ಮ ಅವನನ್ನ ಕರಿಬೇವು ಕಳ್ಳ ಅಂತಾನೆ ಕರೀತಿದ್ರು. ಯಾಕೆಂದ್ರೆ ಒಂದೆರಡು ಸಲ ನಮ್ಮ ಮನೆ ಕಾಂಪೌಂಡ್‍ನಲ್ಲಿದ್ದ ಗಿಡದಲ್ಲಿ ಕರಿಬೇವು ಕೀಳಬೇಕಾದರೆ ಸಿಕ್ಕಿಹಾಕಿಕೊಂಡು, ಬೈಸಿಕೊಂಡಿದ್ದ. ಈ ಘಟನೆ ನಡೆದಾಗ ಅವನೂ ಹೈಸ್ಕೂಲ್‍ನಲ್ಲಿದ್ದ, ಆದರೆ ಬೇರೆ ಸ್ಕೂಲ್‍ನಲ್ಲಿ. ಅದೇ ಕ್ಲಾಸ್‍ನಲ್ಲಿ ಎರಡು-ಮೂರು ಸಲ ಓದಿದ ರೆಕಾರ್ಡ್ ಬೇರೆ ಇತ್ತು ಅವನ ಹೆಸರಲ್ಲಿ, ಅದೂ ಆ ರೆಕಾರ್ಡ್‍ನ ಒಂದಕ್ಕಿಂತ ಹೆಚ್ಚು ಸಲ ರಿಪೀಟ್ ಮಾಡಿದ್ದ ಕೂಡ. ಆಗಲೇ ಅವರ ಸ್ಕೂಲಿನಲ್ಲಿ ಪ್ಲಸ್ ಸ್ಕೂಲ್ ಹೊರಗಡೆ ತರಲೆ-ಕಿತಾಪತಿಗೆ ಹೆಸರುವಾಸಿಯಾಗಿದ್ದ. ಬರೀ ಅಷ್ಟೇ ಅಗಿದ್ದಿದ್ದರೆ ಪರವಾಗಿರ್ಲಿಲ್ಲ ಜೊತೆಗೆ ಸಣ್ಣ-ಪುಟ್ಟ ಕಳ್ಳತನ, ಹುಡುಗಿಯರನ್ನು ರೇಗಿಸುವುದು ಇತ್ಯಾದಿಯೂ ಸೇರಿದ್ದವು. ಅವನ ಬಗ್ಗೆ ಇಷ್ಟು ಹೇಳಿದ್ರೆ ಸಾಕು ಅನ್ನ್ಸುತ್ತೆ, ಸರಿ ಆ ಶನಿವಾರ ಮಧ್ಯಾಹ್ನಕ್ಕೆ ವಾಪಸ್ಸಾಗೋಣ.

ಅವತ್ತು, ಸ್ಟಡ್ ಫ಼ಾರ್ಮ್ (ನಮ್ಮೂರಿನವರ ಬಾಯಲ್ಲಿ ಅದು ಕುದುರೆ ಫ಼ಾರಮ್ಮು) ದಾಟಿ ರೇವತಿ ಹೋಟೆಲ್ ದಿಣ್ಣೆ ಹತ್ತಿ ಇನ್ನೇನು ಮುಂದಕ್ಕೆ ಹೋಗಬೇಕು ಅನ್ನೋ ಅಷ್ಟರಲ್ಲಿ ಕೆಂಚ ಅವನ ಸೈಕಲ್ ತಂದು ನನಗೆ ಅಡ್ಡ ನಿಲ್ಲಿಸಿದ. ನಾನು ಏನು ಅಂತ ಕೇಳಕ್ಕೆ ಮುಂಚೇನೆ ಅವನು ನನ್ನ ಕೇಳ್ದ, ಅದೂ ಜೋರು ಮಾಡೋ ರೀತಿಲಿ - "ಏನೊ ನಿಮ್ಮ ತಾತಂಗೆ ಸುಮ್ನೆ ಇರಕ್ಕೆ ಆಗಲ್ವಂತೇನೊ ಸ್ಕೂಲ್‍ನಲ್ಲಿ ??". ಥಟಕ್ಕಂತ ನಾನೂ ಕೇಳಿದೆ "ತಾತಾನಾ? ಯಾರ ತಾತ?". ಯಾಕೆಂದ್ರೆ ನನ್ನ ಇಬ್ರೂ ತಾತಂದಿರು ೧೦-೧೫ ವರ್ಷ ಮುಂಚೇನೆ ಸ್ವರ್ಗವಾಸಿಗಳಾಗಿದ್ದರು. ನನ್ನ ಪ್ರಶ್ನೆ ಕೇಳಲೇ ಇಲ್ವೇನೋ ಅನ್ನೊ ಥರಾ "ಏನು ನಿನ್ನ ತಾತ ಪೋಲಿಸ್‍ಗೆ ಕಂಪ್ಲೇಂಟ್ ಕೊಡ್ತಾರಂತ ನನ್ನ ಮೇಲೆ" ಅಂದ. ನನಗೆ ತಲೆ-ಬುಡ ಅರ್ಥವಾಗ್ಲಿಲ್ಲ, "ಏನು ತಲೆ-ಗಿಲೆ ಕೆಟ್ಟಿದೆಯಾ ನಿಂಗೆ?" ಅಂದ. "ಮಗನೆ ನಂಗೇ ತಲೆ ಕೆಟ್ಟಿದೆಯಾ ಅಂತೀಯ?" ಅಂತ ಅವನು ಹೇಳಿಮುಗಿಸಿದ ತಕ್ಷಣಾನೇ, ಫಟೀರ್ ಅಂತ ಶಬ್ದ ಕೇಳಿಸ್ತು. ಅದರ ಜೊತೆಗೆ ನನ್ನ ಎಡಗೆನ್ನೆ ಚುರುಚುರು ಉರಿಯಕ್ಕೆ ಶುರುವಾಯ್ತು. ಎರಡು-ಮೂರು ಸೆಕಂಡ್‍ಗಳಾದ ಮೇಲೆ ಹೊಳೀತು, ಅವನು ನನ್ನ ಕೆನ್ನೆಗೆ ಹೊಡೆದ ಅಂತ.

ಆಮೇಲೆ ಮತ್ತೆರಡು-ಮೂರು ಸೆಕಂಡ್ ಮನಸ್ಸು ಪೂರ್ತಿ ಬ್ಲ್ಯಾಂಕ್. ತಕ್ಷಣ ಮತ್ತೆ ಫಟೀರ್ ಅಂತ ಶಬ್ದ ಕೇಳಿಸ್ತು. ಈ ಸಲ ಅವನು ಕೆನ್ನೆ ಹಿಡಿದುಕೊಂಡು ನಿಂತಿದ್ದ. ಏನಾಯ್ತು ಅಂತ ನನಗೂ ಗೊತ್ತಾಗ್ಲಿಲ್ಲ ಮೊದಲು - ಆಮೇಲೆ ಫ಼್ಲಾಶ್ ಆಯ್ತು, ನಾನೇ ಅವನಿಗೆ ಹೊಡೆದದ್ದು ಅಂತ. ಹೊಡೆದ ಮೇಲೆ ಹೆದರಿಕೆ ಶುರು ಆಯ್ತು. ಅವನೋ ಅಜಾನುಬಾಹು. ನಾನು ನರಪೇತಲ, ಅವನ ಭುಜದಷ್ಟೂ ಎತ್ತರ ಇರಲಿಲ್ಲ ನಾನು. ಸುತ್ತಮುತ್ತ ಓಡಾಡೊವ್ರು ನಮ್ಮನ್ನೇ ನೋಡ್ತಾ ಇದ್ರು, ಏನಾಗುತ್ತೆ ಅಂತ ಕಾಯ್ಕೊಂಡು. ಎರಡು ನಿಮಿಷ ಇಬ್ರೂ ಸೈಲೆಂಟ್‍ ಆಗಿ ಒಬ್ಬರ ಮುಖ ಒಬ್ರು ನೋಡ್ತ ನಿಂತಿದ್ವಿ, ಇದ್ದಕ್ಕಿದ್ದಂಗೆ ಜೀವ ಬಂದಂಗೆ ಕೆಂಚ ಕೆಳಕ್ಕೆ ಬಿದ್ದಿದ್ದ ಸೈಕಲ್ ಎತ್ತಿಕೊಂಡು ಹತ್ತಿ ಹೊರಟೇ ಬಿಟ್ಟ. ಐದು ನಿಮಿಷ ನಾನು ಮಿಕಿಮಿಕಿ ನೋಡ್ತ ನಿಂತಿದ್ದು ಸೈಕಲ್ ಎತ್ಕೊಂಡು ಮನೆಗೆ ಹೋದೆ.

ಮನೆಗೆ ಹೋದ ಮೇಲೆ ಹೀಗೆ ಹೀಗೆ ಆಯ್ತು ಅಂತ ಎಲ್ಲ ಹೇಳಿದೆ. ಆಗ ಅವನ ವರ್ತನೆ ಬಗ್ಗೆ ತಿಳೀತು ನನಗೆ. ನಮ್ಮ ತಂದೆ ಒಂದು ಗರ್ಲ್ಸ್ ಸ್ಕೂಲ್‍ನಲ್ಲಿ ಟೀಚರ್ ಆಗಿದ್ರು. ಒಂದೆರಡು ದಿನಗಳಾ ಹಿಂದೆ ಆ ಸ್ಕೂಲ್ ಹತ್ತಿರ ಓಡಾಡ್ಕೊಂಡು ಹುಡುಗೀರನ್ನ ಚುಡಾಯಿಸ್ತಾ ಇದ್ದ ಅವನು. ನಮ್ಮ ತಂದೆ ಅವನನ್ನ ಹಿಡಿದು ಎಚ್ಚರಿಕೆ ಕೊಟ್ಟು, ಇನ್ನೊಂದು ಸಲ ಈ ರೀತಿ ಆದರೆ ಪೋಲಿಸ್‍ಗೆ ಹೇಳ್ತೀವಿ ಅಂತ ಬೈದು ಕಳಿಸಿಬಿಟ್ಟಿದ್ದರು. ಅದರ ಜೊತೆಗೆ ನಮ್ಮ ತಂದೆಗೆ ತಲೆ ಪೂರ್ತಿ ಬಿಳಿ ಕೂದಲು, ಹೊಸಬರು ಬಹಳಷ್ಟು ಜನರು ನಮ್ಮಿಬ್ಬರನ್ನು ತಾತ-ಮೊಮ್ಮಗ ಅಂತ confuse ಮಾಡಿಕೊಂಡಿದ್ದಾರೆ.

ಈ ಘಟನೆ ನಡೆದು ೧೨-೧೩ ವರ್ಷಗಾಳದವು. ಬಹಳಷ್ಟು ಸಲ ಅವನನ್ನ ನೋಡಿದ್ದೇನೆ ಊರಿನಲ್ಲಿ. ಸ್ವಲ್ಪ ದಿನ ಆಟೋ ಕೂಡ ಓಡಿಸ್ತಿದ್ದ. ಎರಡು ಸಲ ಅವನ ಆಟೋನಲ್ಲೇ ಕೂತು ಮನೆಗೆ ಬಂದಿದ್ದೇನೆ. ಈ ಘಟನೆ ಅವನಿಗೆ ಜ್ಞಾಪಕವಿದೆಯೋ ಇಲ್ವೋ, ಆದರೆ ನನಗಂತೂ ಇನ್ನೂ ಮರೆಯಕ್ಕೆ ಆಗಿಲ್ಲ.

1 comment:

Gubbacchi said...

Good one :)
I was reading other few kannada articles and link brought here..:)