Showing posts with label ಕವನ. Show all posts
Showing posts with label ಕವನ. Show all posts

Tuesday, January 23, 2007

ಏಕಾಂಗಿ

ನನ್ನ ಇನ್ನೊಂದು ಹಳೆಯ ಕವನ -- ಏಕಾಂಗಿ

ಮತ್ತೊಂದು ಹಗಲು, ಮತ್ತೊಂದು ಇರುಳು
ತೆರೆದ ಪುಸ್ತಕದ ಹಾಳೆ ಮಗುಚಿದಂತೆ ಕಳೆಯಿತು
ಕಾಲಗಣನೆಯ ಚಿಂತೆ ನನಗಿಲ್ಲ
ಆಲೋಚನೆಗಳಲ್ಲಿ ಮುಳುಗಿರುವೆ, ಮನಸು ಏಕಾಂಗಿ

ಹಾದಿಯಲಿ ನಡೆವಾಗ ಪರಿಚಿತರಿಗಾಗಿ ಕಣ್ಣರಸುತ್ತದೆ
ಮುಖವಾಡದ ಕಪಟನಗೆ ಕಂಡು ಮನ ಮುದುಡುತ್ತದೆ
"ಇದಲ್ಲ ನಿನ ಜಾಗ, ಓಡೆಂದು" ಒಳಮನಸು ಚೀರುತ್ತದೆ
ಎಲ್ಲೇ ಹೋಗು ಅದೇ ಮುಖ, ಅದೇ ಕಪಟ ನಗೆ

ನಿನ್ನೆ ಇದ್ದವರು ಇಂದಿಲ್ಲ
ಇಂದಿರುವವರು ನಾಳೆ ಎಲ್ಲೊ
ಬಾಳೆಂಬ ಆಟದಲಿ ಎಲ್ಲರೂ ಏಕಾಂಗಿಗಳು
ನಾಲ್ಕುದಿನದ ಬದುಕಿನಲಿ ಜೊತೆಗಾರರ ಹುಡುಕಾಟವು

ಏಕಾಕಿತನದ ಆಲೋಚನೆಗಳ ನಡುವೆ
ಅಕ್ಕನ ಪುಸ್ತಕದ ಸಾಲುಗಳು ಅಣಕಿಸುತ್ತವೆ
"ಹಮ್ ಇಸ್ ದುನಿಯಾ ಮೆ ಆತೆ ಭಿ ಅಕೇಲೆ, ಔರ್ ಜಾತೆ ಭಿ ಅಕೇಲೆ
ಚಾರ್ ದಿನ್ ಕಿ ಇಸ್ ದುನಿಯಾ ಮೆ ಹಮ್ ಅಕೇಲೆ ಹಿ ಅಕೇಲೆ"
~ ಮಾಪ್ರಶಾಂತ

Tuesday, January 16, 2007

ಅಲ್ಪ

Trying to revive the blog - ಸುಮಾರು ಒಂದೂವರೆ ವರ್ಷದ ಹಿಂದೆ ಬರೆದ ಒಂದು ಕವನ -

ಅಲ್ಪ

ನಾನು! ಎರಡಕ್ಷರಗಳಲ್ಲಿ ಅದೆಷ್ಟು ದರ್ಪ
ನಾನೇ ದೊಡ್ಡವ, ನನ್ನಿಂದಲೇ ಸರ್ವಸ್ವ
ಎಂಬ ಒಣಪ್ರತಿಷ್ಠೆ, ಹಮ್ಮು-ಬಿಮ್ಮು
ಆದರೆ,

ಬೆಳುಗುಳದ ಗೊಮ್ಮಟನ ಮುಂದೆ
ಹಮ್ಮು-ಬಿಮ್ಮುಗಳು ಬೆಟ್ಟದಿಂದುರುಳುತ್ತವೆ
ಒಣಪ್ರತಿಷ್ಠೆ ಸಮಿತ್ತಿನಂತೆ ಉರಿಯುತ್ತದೆ
ತ್ಯಾಗಮೂರ್ತಿಯ ಮುಂದೆ ಬೆತ್ತಲಾಗಿ ನಿಲ್ಲುವನು

ತನಗೆಲ್ಲಾ ಗೊತ್ತೆನುವ ಮನುಜನಿಗೆ
ರತ್ನಗರ್ಭಾ ವಸುಂಧರಳದು ಮೌನ ಸವಾಲು
ಅನ್ನ ಕೊಟ್ಟ ತಾಯಿಯ ಋಣಮರೆತು ಕುಣಿಯುವನು
ಆಕೆಯೊಮ್ಮೆ ಮೈಕೊಡವಿದೊಡೆ ಸದ್ದಿಲ್ಲದೆ ಮಲಗುವನು

ಕಡಲ ತೀರದಿ ಕಣ್ಣರಳಿಸಿ ನಿಂತಾಗ, ಅಲೆಗಳಂತೆ
ವಿ. ಕೃ. ಗೋಕಾಕರ ಸಾಲುಗಳು ಸುಳಿದಾವು
"ಮೆರೆಯಬಂದ ಮಾನವನು ಮಗುವಾಗಿ ಮರಳುವನು"
ಅದು ನಾನು ಅಣುವಿಗಿಂತಲೂ ಅಣುವೆನ್ನುವಷ್ಟೇ ಸತ್ಯ
~ ಮಾಪ್ರಶಾಂತ

Monday, March 13, 2006

ನೆನಪುಗಳು - ಹಳೆಯದೊಂದು ಕವನ

Blog update ಮಾಡಿ ಬಹಳ ದಿನಗಳಾದವು. ಜೊತೆಗೆ ಬರೆಯಲೂ ಸಮಯ ಸಿಗುತ್ತಿಲ್ಲ. ಹಾಗಾಗಿ ನಾನು ಬಹಳ ಹಿಂದೆ ಬರೆದಿದ್ದ ಒಂದು ಕವನವನ್ನು post ಮಾಡುತ್ತಿದ್ದೇನೆ
--
ನೆನಪುಗಳು
ಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ,
ಮನದಲಿ ಸವಿ ನೆನಪುಗಳನು ಬಿತ್ತಿ

ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ
ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ

ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ
ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ

ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ
ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ

ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ
ಮಾವಿನ ಮರಕೆ ಕಲ್ಲನು ಹೊಡೆದು ಹಣ್ಣ ಕೆಡವ ಬನ್ನಿ

ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ

~ ಮಾಪ್ರಶಾಂತ

Thursday, January 26, 2006

ಇಂದು ಪ್ರಶಾಂತ್‍ನ ಹುಟ್ಟುಹಬ್ಬ.

ಇಂದು ಪ್ರಶಾಂತ್‍ನ ಹುಟ್ಟುಹಬ್ಬ.
"ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಪಚ್ಚಿ :)"
ಈ ಸಂದರ್ಭದಲ್ಲಿ ನಮ್ಮ ತ.ವಿ.ಶ್ರೀನಿವಾಸ್‍ರ ಶುಭಸಂದೇಶವನ್ನು ಇಲ್ಲಿ ಹಾಕುತ್ತಿದ್ದೇನೆ. ಧನ್ಯವಾದಗಳು ಸಾರ್. :)

"ಇಂದು ಜನವರಿಯ ೨೬ನೇ ತಾರೀಖು. ಗಣರಾಜ್ಯೋತ್ಸವ ದಿನ. ಎಲ್ಲರಿಗೂ ಹರುಷ ತರುತ್ತಿರುವ ದಿನ. ಆದರಿನ್ನೂ ಹೆಚ್ಚಿನ ಸಂತಸದ ವಿಷಯ ಅಂದ್ರೆ ನಮ್ಮೆಲ್ಲರ ನಲ್ಮೆಯ ಮಿತ್ರರಾದ ಮಾ.ಪ್ರಶಾಂತರ ಜನುಮದ ದಿನ. ನಾವೆಲ್ಲರೂ ಅವರಿಗೆ ಶುಭಾಶಯವನ್ನು ಕೋರೋಣ."


ಕನ್ನಡಮ್ಮನ ಕುತ್ತಿಗೆಯಲಿಹುದು ಮುತ್ತಿನ ಹಾರ
ಆ ಹಾರದಲ್ಲೊಂದು ಪ್ರಜ್ವಲಿಪ ಮಾಣಿಕ್ಯ
ಆ ಮಾಣಿಕ್ಯದ ಜೊತೆಗಿನ್ನೊಂದು ಪುಟ್ಟ ಮುತ್ತು
ಹೆಮ್ಮೆಯಿಂದ ಬೀಗುತಿಹರು ಇದ ನಮಗಿತ್ತು

ಸಹಸ್ರಾರು ಮಕ್ಕಳಿಗೆ ದಾರಿ ದೀಪ ಆ ಮಾಣಿಕ್ಯ
ತೋರಲಿ ಕೋಟ್ಯಂತರ ಕನ್ನಡಿಗರಿಗೆ ದಾರಿ ಈ ಮುತ್ತು
ವಾಕ್ ಕಲಿಸಿದ ಮೊದಲ ಗುರು ವಾಗ್ದೇವಿ ಅಮ್ಮ
ಛಾಯಾಚಿತ್ರ ಸೆರೆ ಹಿಡಿಯುವುದರಲ್ಲಿ ಅಪ್ರತಿಮ

ಹೆಸರಿಸಲು ಬಾರದವರ ಬಾಯಲ್ಲಿ ಇವರು ಅಪಭ್ರಂಶ
ಹೆಸರಿಸಿಕೊಂಡರದಕೆ ಗಣಿತದ ಭಾಷಾ
ಟೆಸ್ಟಿಂಗ್ ಪ್ರವೀಣ ಈ ತಂತ್ರಾಂಶ ಅಭಿಯಂತ
ಸಾಹಿತ್ಯ ಸೇವೆಯಲೇನೂ ಕಡಿಮೆ ಇಲ್ಲದ ಪಂಡಿತ

ಸುಶೀಲರ ಜೊತೆಗೂಡಿ ನಡೆಸುತಿಹರು ಬ್ಲಾಗು
ಕನ್ನಡ ಅವಹೇಳನ ಮಾಡುವವಗೆ ಇವರ ಕೂಗು
ಇವರ ಹಿಡಿತದಲ್ಲಿಟ್ಟಿಹಳು ಆ ಬಾಸಮ್ಮ
ಸಾಹಿತ್ಯ ಭಂಡಾರದೊಡೆಯರು ಇವರ ಜನಕ

ವಾರಕ್ಕೊಮ್ಮೆ ಇವರ ಭೇಟಿ ಕುಣಿಗಲ್ಲಿಗೆ
ಮಾರು ಹೋಗಿಹರು ಹಳ್ಳಿಯ ಸೊಗಡಿಗೆ
ಛಾಯಾಚಿತ್ರದಲಿ ಸೆರೆ ಹಿಡಿದಿಹರು ಚಿಣ್ಣರ ಮುಗ್ಧ ಮುಖವ
ಕವನದಲಿ ಸೆರೆ ಹಿಡಿದಿಹರು ಕಾಣದಿರುವ ಆ ಮುಖವ

ಚೆನ್ನೈನ ಕಂಡಕ್ಟರನ್ನೊಮ್ಮೆ ಪ್ರದರ್ಶಿಸಿದರು
ಅಸುನೀಗಿದ ಪುಟ್ಟ ಕಂದಮ್ಮನ ಅಳಲು ತೋರಿದರು
ಇವರ ಕೈ ಇನ್ನೂ ಬಲಗೊಳ್ಳಲಿ ತಾಯ ಸೇವೆಗೆ
ನಾವೆಲ್ಲರೂ ಹಾರೈಸುವ ಇವರ ಸುದೀರ್ಘ ಆಯಸ್ಸಿಗೆ

ಆ ಸರ್ವಶಕ್ತನಲ್ಲಿ ನನ್ನ ಬೇಡಿಕೆ ಇವರಿಗೆ ಆಯುರಾರೋಗ್ಯ,
ಅಷ್ಟೈಶ್ವೈರ್ಯ, ಸುಖ ದು:ಖಗಳನ್ನು ಸಮನಾಗಿ
ಸ್ವೀಕರಿಸುವ ಶಕ್ತಿಯನ್ನಿತ್ತು ಕನ್ನಡ-ಕನ್ನಡಿಗರ
ಸೇವೆಯನ್ನು ಇನ್ನೂ ಹೆಚ್ಚಿನದಾಗಿ ಮಾಡುವಂತೆ ಮಾಡಲಿ ಎಂದು ಬೇಡುವೆ.
ನೂರ್ಕಾಲ ಬಾಳಲಿ ನಂಬಿದವರೆಲ್ಲರನೂ ಬದುಕಿಸಲಿ