Tuesday, January 23, 2007

ಏಕಾಂಗಿ

ನನ್ನ ಇನ್ನೊಂದು ಹಳೆಯ ಕವನ -- ಏಕಾಂಗಿ

ಮತ್ತೊಂದು ಹಗಲು, ಮತ್ತೊಂದು ಇರುಳು
ತೆರೆದ ಪುಸ್ತಕದ ಹಾಳೆ ಮಗುಚಿದಂತೆ ಕಳೆಯಿತು
ಕಾಲಗಣನೆಯ ಚಿಂತೆ ನನಗಿಲ್ಲ
ಆಲೋಚನೆಗಳಲ್ಲಿ ಮುಳುಗಿರುವೆ, ಮನಸು ಏಕಾಂಗಿ

ಹಾದಿಯಲಿ ನಡೆವಾಗ ಪರಿಚಿತರಿಗಾಗಿ ಕಣ್ಣರಸುತ್ತದೆ
ಮುಖವಾಡದ ಕಪಟನಗೆ ಕಂಡು ಮನ ಮುದುಡುತ್ತದೆ
"ಇದಲ್ಲ ನಿನ ಜಾಗ, ಓಡೆಂದು" ಒಳಮನಸು ಚೀರುತ್ತದೆ
ಎಲ್ಲೇ ಹೋಗು ಅದೇ ಮುಖ, ಅದೇ ಕಪಟ ನಗೆ

ನಿನ್ನೆ ಇದ್ದವರು ಇಂದಿಲ್ಲ
ಇಂದಿರುವವರು ನಾಳೆ ಎಲ್ಲೊ
ಬಾಳೆಂಬ ಆಟದಲಿ ಎಲ್ಲರೂ ಏಕಾಂಗಿಗಳು
ನಾಲ್ಕುದಿನದ ಬದುಕಿನಲಿ ಜೊತೆಗಾರರ ಹುಡುಕಾಟವು

ಏಕಾಕಿತನದ ಆಲೋಚನೆಗಳ ನಡುವೆ
ಅಕ್ಕನ ಪುಸ್ತಕದ ಸಾಲುಗಳು ಅಣಕಿಸುತ್ತವೆ
"ಹಮ್ ಇಸ್ ದುನಿಯಾ ಮೆ ಆತೆ ಭಿ ಅಕೇಲೆ, ಔರ್ ಜಾತೆ ಭಿ ಅಕೇಲೆ
ಚಾರ್ ದಿನ್ ಕಿ ಇಸ್ ದುನಿಯಾ ಮೆ ಹಮ್ ಅಕೇಲೆ ಹಿ ಅಕೇಲೆ"
~ ಮಾಪ್ರಶಾಂತ

Tuesday, January 16, 2007

ಅಲ್ಪ

Trying to revive the blog - ಸುಮಾರು ಒಂದೂವರೆ ವರ್ಷದ ಹಿಂದೆ ಬರೆದ ಒಂದು ಕವನ -

ಅಲ್ಪ

ನಾನು! ಎರಡಕ್ಷರಗಳಲ್ಲಿ ಅದೆಷ್ಟು ದರ್ಪ
ನಾನೇ ದೊಡ್ಡವ, ನನ್ನಿಂದಲೇ ಸರ್ವಸ್ವ
ಎಂಬ ಒಣಪ್ರತಿಷ್ಠೆ, ಹಮ್ಮು-ಬಿಮ್ಮು
ಆದರೆ,

ಬೆಳುಗುಳದ ಗೊಮ್ಮಟನ ಮುಂದೆ
ಹಮ್ಮು-ಬಿಮ್ಮುಗಳು ಬೆಟ್ಟದಿಂದುರುಳುತ್ತವೆ
ಒಣಪ್ರತಿಷ್ಠೆ ಸಮಿತ್ತಿನಂತೆ ಉರಿಯುತ್ತದೆ
ತ್ಯಾಗಮೂರ್ತಿಯ ಮುಂದೆ ಬೆತ್ತಲಾಗಿ ನಿಲ್ಲುವನು

ತನಗೆಲ್ಲಾ ಗೊತ್ತೆನುವ ಮನುಜನಿಗೆ
ರತ್ನಗರ್ಭಾ ವಸುಂಧರಳದು ಮೌನ ಸವಾಲು
ಅನ್ನ ಕೊಟ್ಟ ತಾಯಿಯ ಋಣಮರೆತು ಕುಣಿಯುವನು
ಆಕೆಯೊಮ್ಮೆ ಮೈಕೊಡವಿದೊಡೆ ಸದ್ದಿಲ್ಲದೆ ಮಲಗುವನು

ಕಡಲ ತೀರದಿ ಕಣ್ಣರಳಿಸಿ ನಿಂತಾಗ, ಅಲೆಗಳಂತೆ
ವಿ. ಕೃ. ಗೋಕಾಕರ ಸಾಲುಗಳು ಸುಳಿದಾವು
"ಮೆರೆಯಬಂದ ಮಾನವನು ಮಗುವಾಗಿ ಮರಳುವನು"
ಅದು ನಾನು ಅಣುವಿಗಿಂತಲೂ ಅಣುವೆನ್ನುವಷ್ಟೇ ಸತ್ಯ
~ ಮಾಪ್ರಶಾಂತ